ಬೆಂಗಳೂರು: ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗರ್ಲಾನಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ರಾಗಿಣಿ, ಸಂಜನಾ ಅವರಿಗೆ ಎನ್.ಡಿ.ಪಿ.ಎಸ್. ಕಾಯ್ದೆ ಮುಳುವಾಗಿದೆ. ಬೇರೆ ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆಗೆ 90 ದಿನಗಳು ಮಾತ್ರ ಅವಕಾಶವಿದೆ. ಆದರೆ, ಎನ್.ಡಿ.ಪಿ.ಎಸ್. ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಲು 180 ದಿನಗಳು ಅವಕಾಶವಿದೆ ಎನ್ನಲಾಗಿದೆ.
ಜಾಮೀನು ಪಡೆಯಲು ಆರೋಪಿತರು ಕೋರ್ಟ್ ಗೆ ಸಕಾರಣವನ್ನು ನೀಡಬೇಕಿದೆ. ತಪ್ಪೆಸಗಿಲ್ಲ ಎಂಬುದನ್ನು ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು. ಮನವರಿಕೆ ಮಾಡಲು ವಿಫಲವಾದರೆ ಜಾಮೀನು ಸಿಗುವುದಿಲ್ಲ. ಸುಪ್ರೀಂಕೋರ್ಟ್ ನಲ್ಲೂ ಜಾಮೀನು ಸಿಗದಿದ್ದರೆ, ಆರು ತಿಂಗಳು ಜೈಲುವಾಸ ಅನುಭವಿಸಬೇಕು.
ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಜಾಮೀನಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಎನ್.ಡಿ.ಪಿಎಸ್. ವಿಶೇಷ ಕಾಯ್ದೆ ಆಗಿರುವುದರಿಂದ ನಟಿಯರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಿಸಿಬಿಗೆ ಆರು ತಿಂಗಳು ಸಮಯ ಸಿಗುತ್ತದೆ. ಹೀಗಾಗಿ ರಾಗಿಣಿ ಮತ್ತು ಸಂಜನಾ ಅವರಿಗೆ ಎನ್.ಡಿ.ಪಿ.ಎಸ್. ಕಾಯ್ದೆ ಮುಳುವಾಗಿದೆ ಎಂದು ಹೇಳಲಾಗಿದೆ.