ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಹೈದರಾಬಾದ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಟ ರಜನಿಕಾಂತ್ ಅವರ ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಉಂಟಾಗಿದ್ದು, ಅವರನ್ನು ಹೈದರಾಬಾದ್ ನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ರಜನಿಕಾಂತ್ ಅವರ ’ಅನ್ನಾತೆ’ ಚಿತ್ರದ ಶೂಟಿಂಗ್ ಹೈದ್ರಾಬಾದ್ ನಲ್ಲಿ ನಡೆಯುತ್ತಿದ್ದು, ಶೂಟಿಂಗ್ ಸೆಟ್ ನಲ್ಲಿ ಹಲವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸದ್ಯ ಶೂಟಿಂಗ್ ತಾತ್ಕಾಲಿಕ ಸ್ಥಗಿತಗೊಂಡಿದೆ.
ಶೂಟಿಂಗ್ ಸೆಟ್ ನಲ್ಲಿ ಸೋಂಕು ಹಿನ್ನೆಲೆಯಲ್ಲಿ ರಜನಿಕಾಂತ್ ಅವರಿಗೂ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಅವರ ವರದಿಯಲ್ಲಿ ನೆಗೆಟಿವ್ ಬಂದಿದೆ. ಆದರೂ ಇದೀಗ ಅವರ ಬಿಪಿಯಲ್ಲಿ ಏರಿಳಿತವಾಗುತ್ತಿರುವುದರಿಂದ ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ರಜನಿಕಾಂತ್ ಅವರಿಗೆ ರಕ್ತದೊತ್ತಡ ಹಾಗೂ ತೀವ್ರ ಸುಸ್ತು ಇದ್ದು ಬೇರಾವ ಆರೋಗ್ಯ ಸಮಸ್ಯೆ ಇಲ್ಲ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.