ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ಸಿಂಹಸ್ವಪ್ನವಾಗಿದೆ. ಈಗಾಗಲೇ ಸಾಕಷ್ಟು ಟಿಎಂಸಿ ನಾಯಕರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವ ಬಿಜೆಪಿ ಇದೀಗ ಸೆಲೆಬ್ರಿಟಿಗಳ ಮೇಲೂ ಕಣ್ಣಿಟ್ಟಿದೆ. ಪ. ಬಂಗಾಳದಲ್ಲಿ ನಡೆಯುವ ರ್ಯಾಲಿಗಳು ಮತದಾರರ ಮೇಲೆ ಇನ್ನಷ್ಟು ಪರಿಣಾಮ ಬೀರುವಂತೆ ಮಾಡುವ ಸಲುವಾಗಿ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡ್ತಿದೆ.
ಭಾನುವಾರ ಕೊಲ್ಕತ್ತಾದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ರ್ಯಾಲಿಗೆ ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಬಹಿರಂಗ ಆಮಂತ್ರಣ ನೀಡಲಾಗಿತ್ತು. ಇದೀಗ ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಪ್ರಧಾನಿ ಮೋದಿ ನಡೆಸಲಿರುವ ರ್ಯಾಲಿಗೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಲು ಬಿಜೆಪಿ ಕಸರತ್ತು…! ಮತ್ತೊಬ್ಬ ಸ್ಟಾರ್ ನಟನಿಗೆ ಗಾಳ
ತೃಣಮೂಲ ಕಾಂಗ್ರೆಸ್ನ ಮಾಜಿ ಸದಸ್ಯರಾಗಿರುವ ಮಿಥುನ್ ಚಕ್ರವರ್ತಿ ಈ ರ್ಯಾಲಿಯಲ್ಲಿ ಭಾಗಿಯಾಗ್ತಾರೆ ಅನ್ನೋದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಫೆಬ್ರವರಿ 16ರಂದು ಮಿಥುನ್ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ರನ್ನ ಭೇಟಿಯಾಗಿರೋದು ಈ ಎಲ್ಲ ವದಂತಿಗಳಿಗೆ ಮೂಲ ಕಾರಣವಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ , ಮಿಥುನ್ ಚಕ್ರವರ್ತಿ ಭಾನುವಾರ ನಡೆಯಲಿರುವ ಬಿಜೆಪಿ ರ್ಯಾಲಿಯಲ್ಲಿ ಭಾಗಿಯಾದ್ರೆ ಪಶ್ಚಿಮ ಬಂಗಾಳದ ಜನತೆಗೆ ಖುಷಿಯಾಗಲಿದೆ ಎಂದು ಹೇಳಿದ್ರು. ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ ವಿಧಾನಸಭಾ ಚುನಾವಣೆ ಮಾರ್ಚ್ 27ರಿಂದ ಆರಂಭವಾಗಲಿದೆ. ಈ ಬಾರಿ 8 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.