ಮುಂಬೈ: 21 ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ವಿರುದ್ಧ ಇಲ್ಲಿನ ನ್ಯಾಯಾಲಯ ಮಂಗಳವಾರ ಜಾಮೀನು ಪಡೆಯಬಹುದಾದ ವಾರಂಟ್ ಹೊರಡಿಸಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್(ಅಂಧೇರಿ ನ್ಯಾಯಾಲಯ) ವಾರಂಟ್ ಜಾರಿ ಮಾಡಿದೆ. ಶಿಲ್ಪಾಶೆಟ್ಟಿ, ಅವರ ತಾಯಿ ಸುನಂದಾ ಮತ್ತು ಸಹೋದರಿ ಶಮಿತಾ ಶೆಟ್ಟಿ ಅವರಿಗೆ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರು ದಾಖಲಿಸಿದ ವಂಚನೆ ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಲಾಗಿತ್ತು.
ಕುಟುಂಬ ಸಮನ್ಸ್ ಅನ್ನು ಸೆಷನ್ಸ್ ನ್ಯಾಯಾಲಯದ ಮುಂದೆ ಪ್ರಶ್ನಿಸಿದೆ. ಸೋಮವಾರ, ಸೆಷನ್ಸ್ ನ್ಯಾಯಾಧೀಶ ಎ.ಝಡ್. ಖಾನ್ ಅವರು ಶಿಲ್ಪಾ ಮತ್ತು ಶಮಿತಾ ವಿರುದ್ಧದ ಮ್ಯಾಜಿಸ್ಟ್ರೇಟ್ ಆದೇಶವನ್ನು ತಡೆಹಿಡಿದರು, ಆದರೆ ಅವರ ತಾಯಿಗೆ ಯಾವುದೇ ಪರಿಹಾರವನ್ನು ನೀಡಲಿಲ್ಲ.
ಮೃತ ಸುರೇಂದ್ರ ಶೆಟ್ಟಿ(ಶಿಲ್ಪಾ ಅವರ ತಂದೆ) ಮತ್ತು ಸುನಂದಾ ಅವರ ಸಂಸ್ಥೆಯಲ್ಲಿ ಪಾಲುದಾರರು ಎಂದು ತೋರುತ್ತಿದೆ. ಆದರೆ ಅವರ ಹೆಣ್ಣುಮಕ್ಕಳು ಸಹ ಪಾಲುದಾರರಾಗಿದ್ದಾರೆ. ಅವರ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮಂಗಳವಾರ ಮ್ಯಾಜಿಸ್ಟ್ರೇಟ್ ಅವರು ಹಾಜರಾಗದ ಸುನಂದಾ ಶೆಟ್ಟಿಗೆ ಹಾಜರಾಗಲು ವಿನಾಯಿತಿ ನೀಡಲು ನಿರಾಕರಿಸಿ ಅವರ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿದರು ಎಂದು ದೂರುದಾರ ಪರ್ಹಾದ್ ಅಮ್ರಾ ಅವರನ್ನು ಪ್ರತಿನಿಧಿಸುವ ವೈ ಅಂಡ್ ಎ ಲೀಗಲ್ ನ ವಕೀಲ ಜೈನ್ ಶ್ರಾಫ್ ಹೇಳಿದರು.
2015ರಲ್ಲಿ ಸುರೇಂದ್ರ ಶೆಟ್ಟಿ ಅವರಿಂದ ಸಾಲ ಪಡೆದಿದ್ದು, 2017ರ ಜನವರಿ ವೇಳೆಗೆ ಮರುಪಾವತಿ ಮಾಡಬೇಕಿತ್ತು ಆದರೆ ಮರುಪಾವತಿ ಮಾಡಿಲ್ಲ ಎಂದು ಆಮ್ರಾ ಆರೋಪಿಸಿದ್ದಾರೆ.