ಬಾಲಿವುಡ್ ನಟ ಡಿನೋ ಮೋರಿಯಾ ಹಾಗೂ ಡಿಜೆ ಅಕೀಲ್ ಅಬ್ದುಲ್ ಖಾಲಿಕ್ ಬಚ್ಚೋ ಅಲಿಗೆ ಇಡಿ ಶಾಕ್ ನೀಡಿದೆ. 14500 ಕೋಟಿ ರೂಪಾಯಿ ಬ್ಯಾಂಕ್ ಸಾಲ ಹಾಗೂ ಗುಜರಾತ್ನ ಸ್ಟರ್ಲಿಂಗ್ ಬಯೋಟೆಕ್ ಸಮೂಹಕ್ಕೆ ಸಂಬಂಧಿಸಿದ ಮನಿ ಲ್ಯಾಂಡ್ರಿಂಗ್ ಆರೋಪದ ಅಡಿಯಲ್ಲಿ ಇವರ ಆಸ್ತಿಯನ್ನ ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಹಣಕಾಸು ಸಂಬಂಧ ಅವ್ಯವಹಾರಗಳ ವಿರುದ್ಧ ತನಿಖೆ ನಡೆಸುವ ಜಾರಿ ನಿರ್ದೇಶನಾಲವು, ಈ ಪ್ರಕರಣದಲ್ಲಿ ಸಂದೇಸರನ್ ಹಾಗೂ ಇರ್ಫಾನ್ ಸಿದ್ದಕಿ, ಡಿನೋ ಮೋರಿಯಾ ಹಾಗೂ ಡಿಜೆ ಅಕಿಲ್ ನಡುವಿನ ಹಣದ ವಹಿವಾಟಿನ ಬಗ್ಗೆ ತನಿಖೆ ನಡೆಸುತ್ತಿರೋದಾಗಿ ಹೇಳಿದೆ.
ತನಿಖೆಯಲ್ಲಿ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಡಿಜೆ ಅಕಿಲ್ ಸಂದೇಸರನ್ರಿಂದ 12.54 ಕೋಟಿ ರೂಪಾಯಿಗಳನ್ನ ಸ್ವೀಕರಿಸಿದ್ದಾರೆ.ಅದೇ ರೀತಿ ಇರ್ಫಾನ್ ಸಿದ್ದಕಿ 3.51 ಕೋಟಿ ರೂ. ಹಾಗೂ ಡಿನೋ ಮೋರಿಯಾ 1.4 ಕೋಟಿ ರೂಪಾಯಿಗಳನ್ನ ಸ್ವೀಕರಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಈ ಹಣದ ವಹಿವಾಟನ್ನ ಅಪರಾಧ ಎಂದು ಪರಿಗಣಿಸಲಾಗಿದೆ. ಇದರ ಜೊತೆಯಲ್ಲಿ ಜಾರಿ ನಿರ್ದೇಶನಾಲಯವು ಇರ್ಫಾನ್ ಸಿದ್ದಕಿಯ 2.9 ಕೋಟಿ, ಡಿಜೆ ಅಕೀಲ್ 1.98 ಕೋಟಿ ಹಾಗೂ ಡಿನೋ ಮೋರಿಯಾರ 1.4 ಕೋಟಿ ಮೌಲ್ಯದ ಆಸ್ತಿಯನ್ನೂ ಲಗತ್ತಿಸಿದೆ.
ಸಂದೇಸರನ್ ಪ್ರಕರಣದಲ್ಲಿ 16 ಸಾವಿರ ಕೋಟಿ ರೂಪಾಯಿಯನ್ನ ಅಪರಾಧದ ಹಣವೆಂದು ಪರಿಗಣಿಸಲಾಗಿದೆ.ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಇಡಿ 14,521 ಕೋಟಿ ರೂಪಾಯಿಯನ್ನ ಲಗತ್ತಿಸಿದೆ.
ಈ ಪ್ರಕರಣದಲ್ಲಿ ಸ್ಟರ್ಲಿಂಗ್ ಬಯೋಟೆಕ್ ಹಾಗೂ ಅದರ ಪ್ರರ್ವತಕ, ನಿರ್ದೇಶಕರಾದ ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಕುಮಾರ್ ಜಯಂತಿಲಾಲ್ ಸಂದೇಸರ ಹಾಗೂ ದೀಪ್ತಿ ಸಂದೇಸರ ವಿರುದ್ಧ 14,500 ಕೋಟಿ ರೂಪಾಯಿ ವಂಚನೆ ಪ್ರಕರಣವಿದೆ. ಈ ಮೂವರು ಸದ್ಯ ನಾಪತ್ತೆಯಾಗಿದ್ದಾರೆ.
ನಿತಿನ್ ಹಾಗೂ ಚೇತನ್ ಸಹೋದರರಾಗಿದ್ದು 2017ರಲ್ಲಿ ಭಾರತದಿಂದ ಪಲಾಯನ ಮಾಡಿದ್ದಾರೆ. ಇವರು ಸದ್ಯ ನೈಜೀರಿಯಾದಲ್ಲಿ ಇದ್ದಾರೆ ಎನ್ನಲಾಗಿದ್ದು ದೇಶಕ್ಕೆ ಇವರನ್ನ ವಾಪಸ್ ಕರೆಸಲು ವಿವಿಧ ಪ್ರಯತ್ನಗಳು ನಡೆಯುತ್ತಿದೆ.