ಬೆಂಗಳೂರು: ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡುವಂತೆ ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ಕಲಾವಿದರು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹಿರಿಯ ಕಲಾವಿದರಾದ ಡಿಂಗ್ರಿ ನಾಗರಾಜ್, ಲಕ್ಷ್ಮಿ ದೇವಮ್ಮ, ಬಿ.ಎಲ್. ಮಂಜುಳಾ, ಗಣೇಶ್ ರಾವ್, ಬೆಂಗಳೂರು ನಾಗೇಶ್, ಶೋಭಾ ರಾಘವೇಂದ್ರ ಸೇರಿದಂತೆ ಹಿರಿಯ ಕಲಾವಿದರು ಡಾ. ಅಶ್ವತ್ಥನಾರಾಯಣ ಅವರನ್ನು ಬುಧವಾರ ಅವರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಸುಮಾರು 2 ತಿಂಗಳ ಕಾಲ ಸ್ಥಗಿತಗೊಂಡಿದ್ದ ಕಿರುತೆರೆ ಚಿತ್ರೀಕರಣ ಮತ್ತೆ ಆರಂಭವಾಗಿರುವುದು ಸಂತಸದ ವಿಷಯ. ಆದರೆ, 60 ವರ್ಷ ಮೇಲ್ಪಟ್ಟವರಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲದಿರುವುದರಿಂದ ಹಿರಿಯ ಕಲಾವಿದರಿಗೆ ಸಂಪಾದನೆ ಇಲ್ಲ. ಇದರಿಂದ ದಿನಸಿ, ಮನೆ ಬಾಡಿಗೆ, ಔಷಧಿಗೆ ಹಣ ಇಲ್ಲದೆ ಪರದಾಡುವಂತಾಗುವುದು. ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಿ ಎಂದು ಸಂಘದ ಹಿರಿಯ ಸದಸ್ಯರು ಮನವಿ ಮಾಡಿದ್ದಾರೆ.
ಮಾಸಾಶನ ಬೇಡಿಕೆ: ತಮಿಳುನಾಡು, ಆಂಧ್ರಪ್ರದೇಶದ ಹಿರಿಯ ಕಲಾವಿದರಿಗೆ ಪ್ರತಿ ತಿಂಗಳು ಮಾಸಾಶನ ದೊರೆಯುತ್ತಿದೆ. ಕರ್ನಾಟಕದಲ್ಲೂ ಹಿರಿಯ ಕಲಾವಿದರು ಮತ್ತು ತಂತ್ರಜ್ಞರಿಗೆ ಮಾಸಾಶನ ದೊರೆಯುವಂತಾಗಬೇಕು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕಲಾವಿದರು ಮನವಿ ಮಾಡಿದ್ದಾರೆ.
ಕಲಾವಿದರ ಸಮಸ್ಯೆಗಳನ್ನು ಆಲಿಸಿದ ಡಾ. ಅಶ್ವತ್ಥನಾರಾಯಣ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದ್ದಾರೆ.