
ಪಾಟ್ನಾ: ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬೆನ್ನಲ್ಲೇ ಕುಟುಂಬದಲ್ಲಿ ಮತ್ತೊಂದು ಆಘಾತ ಎದುರಾಗಿದೆ ಸುಶಾಂತ್ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿ ಅವರ ಅತ್ತಿಗೆ ಬಿಹಾರದ ಪೂರ್ನಿಯಾದಲ್ಲಿ ಕೊನೆಯುಸಿರೆಳೆದಿದ್ದಾರೆ.
ಸುಶಾಂತ್ ಸಿಂಗ್ ಸಿಂಗ್ ಅವರ ಸೋದರ ಸಂಬಂಧಿ ಪತ್ನಿ ಸುಧಾದೇವಿ ನಿಧನರಾಗಿದ್ದಾರೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದ ನಂತರ ಊಟ ತಿಂಡಿ ನಿಲ್ಲಿಸಿದ್ದ ಸುಧಾ ದೇವಿ ನಿತ್ರಾಣರಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮುಂಬೈನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆಯುವ ಸಂದರ್ಭದಲ್ಲಿ ಸುಧಾದೇವಿ ಮೃತಪಟ್ಟಿದ್ದಾರೆ.
ಮುಂಬೈನ ವಿಲೇಪಾರ್ಲೆ ಪವನ್ ಹ್ಯಾನ್ಸ್ ಶವಾಗಾರದಲ್ಲಿ ಭಾರಿ ಮಳೆಯ ನಡುವೆ ಅಂತ್ಯಕ್ರಿಯೆ ನೆರವೇರಿದ್ದು, ಬಾಲಿವುಡ್ ಚಿತ್ರರಂಗದ ಪ್ರಮುಖರಾದ ಮುಕೇಶ್ ಚಾಬ್ರಾ, ಕೃತಿ ಸನೊನ್, ರಿಯಾ ಚಕ್ರವರ್ತಿ, ಶ್ರದ್ಧಾ ಕಪೂರ್, ವರುಣ್ ಶರ್ಮಾ, ಅಭಿಷೇಕ್ ಕಪೂರ್, ವಿವೇಕ್ ಒಬೆರಾಯ್, ರಣದೀಪ್ ಹೂಡ, ಪ್ರತೀಕ್ ಬಬ್ಬರ್, ಉದಿತ್ ನಾರಾಯಣ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಪಾಟ್ನಾದಿಂದ ಸುಶಾಂತ್ ಅವರ ತಂದೆ ಮತ್ತು ಇಬ್ಬರು ಸಹೋದರಿಯರು ಆಗಮಿಸಿದ್ದರು. ಬಾಲಿವುಡ್ ಮತ್ತು ಕಿರುತೆರೆಯ ಸ್ನೇಹಿತರು, ಸಹೋದ್ಯೋಗಿಗಳು ಕೂಡ ಇದ್ದರು.
ಭಾನುವಾರ ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ‘ಪವಿತ್ರ ರಿಷ್ತಾ’ ಟಿವಿ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ಸುಶಾಂತ್ ಸಿಂಗ್ 2013ರಲ್ಲಿ ಬೆಳ್ಳಿತೆರೆ ಪ್ರವೇಶಿಸಿದ್ದರು. ‘ಎಂಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ’, ‘ಶುದ್ಧ ದೇಸಿ ರೋಮ್ಯಾನ್ಸ್’, ಮತ್ತು ‘ಚಿಚ್ಚೋರೆ’ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅವರು ಪ್ರಶಂಸೆ ಗಳಿಸಿದ್ದಾರೆ.