ಮುಂಬೈ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ – ಜಯಾ ಬಚ್ಚನ್ ದಂಪತಿ ಮುಂಬೈನ ಪ್ರತಿಷ್ಠಿತ ಜುಹೂ ಪ್ರದೇಶದಲ್ಲಿರುವ ಬಂಗಲೆಯನ್ನು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
‘ಪ್ರತಿಕ್ಷಾ’ ಹೆಸರಿನ ಬಂಗಲೆಯ ಮಾಲೀಕತ್ವದ ವರ್ಗಾವಣೆಯನ್ನು ಉಡುಗೊರೆ ಪತ್ರಗಳ ಮೂಲಕ ಔಪಚಾರಿಕವಾಗಿ ಶ್ವೇತಾ ನಂದಾ ಅವರಿಗೆ ಹಸ್ತಾಂತರ ಮಾಡಲಾಗಿದೆ. ಈ ಆಸ್ತಿ ಎರಡು ಪ್ಲಾಟ್ ಗಳನ್ನು ಒಳಗೊಂಡಿದೆ. ಎರಡು ಉಡುಗೊರೆ ಪತ್ರಗಳಿಗೆ ಬಚ್ಚನ್ ಕುಟುಂಬ ಒಟ್ಟು 50.65 ಲಕ್ಷ ರೂ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದೆ. ಬಂಗಲೆಯ ಮಾರುಕಟ್ಟೆ ಮೌಲ್ಯ 50.63 ಕೋಟಿ ರೂಪಾಯಿ ಆಗಿದೆ.
ಈ ಬಂಗಲೆಯ ಎರಡು ಪ್ಲಾಟ್ ಗಳಲ್ಲಿ ಒಂದು 9585 ಚದರ ಅಡಿಗಳಷ್ಟು ವಿಸ್ತಾರವಾಗಿದ್ದು, ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಜಂಟಿ ಒಡೆತನದಲ್ಲಿ ಇದೆ.
ಅಮಿತಾಭ್ ಬಚ್ಚನ್ ಅವರ ಕುಟುಂಬ ಮುಂಬೈನಲ್ಲಿ ಜಲ್ಸಾ, ಪ್ರತಿಕ್ಷಾ, ಜನಕ್ ಬಂಗಲೆಗಳು ಸೇರಿದಂತೆ ಹಲವಾರು ಆಸ್ತಿಗಳನ್ನು ಹೊಂದಿದೆ. ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ 8,400 ಚದರ ಅಡಿಗಳಷ್ಟು ವಿಸ್ತಾರದ ನಾಲ್ಕು ಕಚೇರಿಗಳನ್ನು ಖರೀದಿಸಿದ್ದಾರೆ. ಈಗ ಪ್ರತಿಕ್ಷಾ ಹೆಸರಿನ ಬಂಗಲೆಯನ್ನು ಪುತ್ರಿ ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ.