ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಎಂ.ಪಿ. ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ದಾಲಿ ಧನಂಜಯ್ ನಿರ್ಮಾಣದ, ಅಗ್ನಿ ಶ್ರೀಧರ್ ಅವರ ಆತ್ಮಕಥೆ ‘ದಾದಾಗಿರಿಯ ದಿನಗಳು’ ಕೃತಿಯನ್ನು ಆಧರಿಸಿದ ‘ಹೆಡ್ ಬುಷ್’ ಭಾಗ-1 ಬಿಡುಗಡೆಗೆ ತಡೆ ಕೋರಿ ಅಜಿತ್ ಜಯರಾಜ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಈ ಚಿತ್ರದಲ್ಲಿ ಡಾಲಿ ಧನಂಜಯ್ ಭೂಗತ ದೊರೆ ಎಂ.ಪಿ. ಜಯರಾಜ್ ಪಾತ್ರ ನಿರ್ವಹಿಸಿದ್ದಾರೆ. ಎಂ.ಪಿ. ಜಯರಾಜ್ ಪುತ್ರ ಅಜಿತ್ ಜಯರಾಜ್ ತಮ್ಮ ತಂದೆಯ ಕುರಿತ ‘ಹೆಡ್ ಬುಷ್’ ಸಿನಿಮಾ ಬಿಡುಗಡೆಗೆ ತಡೆ ನೀಡಬೇಕೆಂದು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಡಾಲಿ ಧನಂಜಯರಿಗೆ ಪತ್ರ ಬರೆದು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ಸೂಚಿಸಲಾಗಿದೆ.
ಅಜಿತ್ ನನಗೆ ಪರಿಚಿತರಾಗಿದ್ದು. ‘ಹೆಡ್ ಬುಷ್’ ಸಿನಿಮಾಗೆ ಅವರು ಶುಭ ಹಾರೈಸಿದ್ದರು. ಇದು ಅಗ್ನಿ ಶ್ರೀಧರ್ ಅವರ ಕೃತಿ ಆಧಾರಿತ ಸಿನಿಮಾ ಆಗಿದ್ದು, ಈಗ ಏಕಾಏಕಿ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಅಗ್ನಿ ಶ್ರೀಧರ್ ಅವರ ಪುಸ್ತಕವನ್ನು ಆಧರಿಸಿ ನಿರ್ಮಿಸಲಾಗಿದೆ, ಸಮಸ್ಯೆಯಿದ್ದರೆ ಅಗ್ನಿಶ್ರೀಧರ್ ಅವರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಶ್ರೀಧರ್ ಅವರ ಪುಸ್ತಕದ ಹಕ್ಕು ತೆಗೆದುಕೊಂಡು ಚಿತ್ರ ನಿರ್ಮಿಸಲಾಗಿದೆ. ಶ್ರೀಧರ್ ಅವರು ಸ್ಕ್ರಿಪ್ಟ್ ಬರೆದುಕೊಟ್ಟಿದ್ದಾರೆ. ನಾನು ನನ್ನ ದುಡಿಮೆಯ ಹಣವನ್ನು ಹೂಡಿಕೆ ಮಾಡಿದ್ದೇನೆ ಎಂದು ಡಾಲಿ ಧನಂಜಯ ಹೇಳಿದ್ದಾರೆ.