ಮರಾಠಿ ನಟಿ ತೇಜಸ್ವಿನಿ ಪಂಡಿತ್ ಅವರು ವರ್ಷಗಳ ಹಿಂದೆ ಪುಣೆಯ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾಗ ಅನುಭವಿಸಿದ ಅವಮಾನಕರ ಅನುಭವವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ತಮ್ಮ ಮನೆ ಮಾಲೀಕರು ಲೈಂಗಿಕವಾಗಿ ಸಹಕರಿಸುವಂತೆ ಕೇಳಿದ್ದಾರೆ ಎಂಬ ವಿಷಯ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಜನಪ್ರಿಯ ಸೌಮಿತ್ರಾ ಪೋಟೆ ಅವರ ಪಾಡ್ಕ್ಯಾಸ್ಟ್ ಮಿತ್ರಮ್ಹಾನೆಯಲ್ಲಿ ಮಾತನಾಡುವಾಗ, ತೇಜಸ್ವಿನಿ ಪಂಡಿತ್ ಅವರು ಪುಣೆಯ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ತಂಗಿದ್ದಾಗ ಅವಮಾನಕರ ಅನುಭವದ ಬಗ್ಗೆ ಮಾತನಾಡಿದ್ದಾರೆ. ಕಾರ್ಪೊರೇಟರ್ ಆಗಿದ್ದ ಅಪಾರ್ಟ್ಮೆಂಟ್ನ ಮಾಲೀಕರು ಲೈಂಗಿಕ ಅನುಕೂಲ ಮಾಡಿಕೊಡುವಂತೆ ಪ್ರಸ್ತಾಪವನ್ನು ಮಾಡಿದ್ದರು ಎಂದು ಅವರು ಬಹಿರಂಗಪಡಿಸಿದರು.
ತೇಜಸ್ವಿನಿ ಅವರು, ಅದು 2009-10 ರ ಸಮಯ. ನಾನು ಸಿನ್ಹಗಡ್ ರಸ್ತೆಯಲ್ಲಿ(ಪುಣೆಯಲ್ಲಿ) ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಇರುತ್ತಿದ್ದೆ. ಆಗ ನನ್ನ ಒಂದೋ ಎರಡೋ ಸಿನಿಮಾಗಳು ಮಾತ್ರ ರಿಲೀಸ್ ಆಗಿದ್ದವು. ಅಪಾರ್ಟ್ಮೆಂಟ್ ಕಾರ್ಪೊರೇಟರ್ ಒಡೆತನದಲ್ಲಿದೆ. ನಾನು ಬಾಡಿಗೆ ಪಾವತಿಸಲು ಅವರ ಕಚೇರಿಗೆ ಹೋದಾಗ ಅವರು ನನಗೆ ನೇರ ಪ್ರಸ್ತಾಪ ಮಾಡಿದರು. ಮೇಜಿನ ಮೇಲೆ ನೀರಿನ ಲೋಟ ಎತ್ತಿಕೊಂಡು ಅವನ ಮುಖದ ಮೇಲೆ ಎರಚಿದ್ದೆ.. ನಾನು ಅಂತಹ ಕೆಲಸಗಳನ್ನು ಮಾಡಲು ಈ ವೃತ್ತಿ ಪ್ರವೇಶಿಸಲಿಲ್ಲ, ಇಲ್ಲದಿದ್ದರೆ ನಾನು ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿ ಉಳಿಯುತ್ತಿರಲಿಲ್ಲ ಎಂದು ದಬಾಯಿಸಿದ್ದೆ.
ನನ್ನ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದರಿಂದ, ನನ್ನ ವೃತ್ತಿಯ ಕಾರಣದಿಂದ ಅವರು ನನ್ನನ್ನು ಆ ರೀತಿ ಸಹಕರಿಸುವಂತೆ ಕೇಳಿದ್ದರು. ಇದು ನನಗೆ ಕಲಿಕೆಯ ಅನುಭವವಾಗಿತ್ತು ಎಂದು ಹೇಳಿದ್ದಾರೆ.