
ಬೆಂಗಳೂರು: ಲಾಕ್ಡೌನ್ ಜಾರಿಯಾದ ನಂತರ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದ್ದು ಸಹನಟರಿಗೆ ಪ್ಯಾಕೇಜ್ ಸೇರಿದಂತೆ ವಿವಿಧ ನೆರವಿಗೆ ಒತ್ತಾಯಿಸಿ ಇಂದು ಚಿತ್ರರಂಗದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು.
ನಟ ಶಿವರಾಜ್ ಕುಮಾರ್ ನಿವಾಸದಲ್ಲಿ ಚಿತ್ರರಂಗದ ಪ್ರಮುಖರು ಸಭೆ ನಡೆಸಿದ್ದಾರೆ. ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರು ಭಾಗಿಯಾಗಿದ್ದು ಅವರೊಂದಿಗೆ ಚರ್ಚೆ ನಡೆಸಲಾಗಿದೆ.
ಚಿತ್ರೋದ್ಯಮ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಚಿತ್ರರಂಗಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸಹ ಕಲಾವಿದರು, ಕಾರ್ಮಿಕರು ಸಂಕಷ್ಟದಲ್ಲಿದ್ದು ಅವರ ನೆರವಿಗೆ ಮುಂದಾಗಬೇಕೆಂದು ಕೋರಲಾಗಿದೆ. ಇದೇ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎನ್ನಲಾಗಿದೆ.
ಸಭೆಯಲ್ಲಿ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಪುನೀತ್ ರಾಜ್ ಕುಮಾರ್, ಯಶ್, ಉಪೇಂದ್ರ, ಗಣೇಶ್, ‘ದುನಿಯಾ’ ವಿಜಯ್, ರಕ್ಷಿತ್ ಶೆಟ್ಟಿ, ಮುರಳಿ ಸೇರಿದಂತೆ ಹಲವರು ಭಾಗಿಯಾಗಿದ್ದರು.