ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಬರ್ತಡೇ ಕಟೌಟ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವನ್ನಪ್ಪಿದ್ದು, ಮಾಹಿತಿ ತಿಳಿದ ಯಶ್ ಗ್ರಾಮಕ್ಕೆ ಭೇಟಿ ನೀಡಿ ಮೃತ ಅಭಿಮಾನಿಗಳ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ತೊಂದರೆ ಆಗಬಾರದು ಎಂದು ಬರ್ತಡೇ ಆಚರಿಸಿಕೊಂಡಿಲ್ಲ. ಬರ್ತಡೇ ಅಂದರೆ ಭಯವಾಗ್ತಿದೆ. ಹುಟ್ಟುಹಬ್ಬ ಆಚರಣೆ ಬೇಡವೆಂದು ಮೊದಲೇ ಹೇಳಿದ್ದೆ. ಅಭಿಮಾನಿಗಳಿಗೆ ನಾನು ಇರುವುದಿಲ್ಲ ಎಂದು ತಿಳಿಸಿದ್ದೆ. ಆದರೆ, ಈ ರೀತಿಯಾಗಿ ಅಭಿಮಾನ ತೋರಿಸಲು ಹೋಗಿದ್ದಾರೆ. ಈ ರೀತಿ ಬ್ಯಾನರ್ ಹಾಕಬೇಕು ಎಂದು ಇಷ್ಟಪಡುವುದಿಲ್ಲ ಅವರು ಎಲ್ಲಿರುತ್ತಾರೋ ಅಲ್ಲಿಂದಲೇ ಹರಸಿದರೆ ಅಷ್ಟೇ ಸಾಕು ಎಂದು ಹೇಳಿದ್ದಾರೆ.
ಬರ್ತಡೇ ನಾನು ಆಚರಿಸಿಕೊಳ್ಳದಿರಲು ಇದೇ ಕಾರಣ. ನಮ್ಮಿಂದ ಯಾರಿಗೂ ತೊಂದರೆಯಾಗಬಾರದು, ಸಹಾಯ ಯಾರು ಬೇಕಾದರೂ ಮಾಡಬಹುದು, ಮಕ್ಕಳನ್ನು ತರಲಾಗುತ್ತದೆಯೇ? ಏನು ಕೊಟ್ಟರೂ ಮಗ ಬರುತ್ತಾನೆಯೇ. ಮಕ್ಕಳನ್ನು ಕಳೆದುಕೊಂಡವರು ಏನು ಹೇಳುತ್ತಾರೆ. ಚಿಕ್ಕ ವಯಸ್ಸಿನ ಹುಡುಗರು. ದಯವಿಟ್ಟು ಈ ರೀತಿ ಅಭಿಮಾನ ತೋರಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಒಳ್ಳೆ ಕೆಲಸ ಮಾಡಿ, ಜೀವನಕ್ಕೆ ಏನಾದರೂ ಮಾಡಿಕೊಂಡು ಖುಷಿಯಾಗಿರಿ. ನನಗೆ ಘಟನೆಯಿಂದ ಬೇಸರ ಆಗಿದೆ. ಫ್ಯಾನ್ಸ್ ಗಳಿಗೆ ಹೇಳಿದ್ರೂ ಬೇಜಾರಾಗುತ್ತಾರೆ. ನನ್ನ ಬಗ್ಗೆ ಬೇಜಾರಾದರೂ ಪರವಾಗಿಲ್ಲ, ನಾನು ಬರ್ತಡೇ ಆಚರಿಸಬೇಡಿ ಎಂದೇ ಹೇಳುತ್ತೇನೆ. ಅಭಿಮಾನಿಗಳು ಅಭಿಮಾನ ತೋರಿಸಬೇಕೆಂದರೆ ಅವರ ಬದುಕಲ್ಲಿ ಅವರು ಖುಷಿಯಾಗಿದ್ದರಷ್ಟೇ ಸಾಕು ಎಂದು ಹೇಳಿದ್ದಾರೆ.
ಏನಾದರೂ ಘೋಷಣೆ ಮಾಡುವುದು ದೊಡ್ಡ ವಿಷಯವಲ್ಲ, ಇದು ಆ ಸಮಯವೂ ಅಲ್ಲ. ಏನು ಅವಶ್ಯಕತೆ ಇದೆ ಅದನ್ನು ಮಾಡೋಣ. ಇದು ಯಾವುದೇ ವಾದ, ವಿವಾದ ಆಗಬಾರದು. ಅವರ ತಂದೆ, ತಾಯಿ ಮೇಲಿನ ಗೌರವದಿಂದ ಇಲ್ಲಿಗೆ ಬಂದಿದ್ದೇನೆ. ದಯವಿಟ್ಟು ಯಾವುದೇ ಕಾರಣಕ್ಕೂ ನಮ್ಮ ಮೇಲೆ ಅಭಿಮಾನ ತೋರಿಸಲು ಹೋಗಿ ನಿಮ್ಮ ಜೀವಕ್ಕೆ, ಕುಟುಂಬಕ್ಕೆ ತೊಂದರೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಇವತ್ತು ಬರ್ತಡೇ ಇದ್ದರೂ ನಾನು ಯಾರೊಂದಿಗೂ ಆಚರಿಸುವುದಿಲ್ಲ. ಕುಟುಂಬದವರಿಗೂ ಇದ್ದೆ. ನಮ್ಮಿಂದ ಯಾರಿಗೂ ತೊಂದರೆ ಆಗಬಾರದು. ಅಭಿಮಾನಿಗಳು ದಯವಿಟ್ಟು ಇರುವ ಸ್ಥಳದಲ್ಲೇ ಹಾರೈಸಿ. ಈ ರೀತಿ ಬ್ಯಾನರ್ ಹಾಕಬೇಡಿ ಎಂದು ಯಶ್ ಹೇಳಿದ್ದಾರೆ.