ಚೆನ್ನೈ: ತಮಿಳು ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಎಂ. ಸುಬ್ರಹ್ಮಣಿಯಂ ಅವರು ಮುಖ್ಯ ನ್ಯಾಯಮೂರ್ತಿ ಎ.ಪಿ. ಸಾಹಿ ಅವರಿಗೆ ಪತ್ರ ಬರೆದಿದ್ದಾರೆ.
ನೀಟ್ ಪರೀಕ್ಷೆ ಹಾಗೂ ಕೊರೊನಾ ಭಯದಿಂದ ತಮಿಳುನಾಡಿನಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಇದು ವಿವಾದಕ್ಕೆ ಕಾರಣವಾಗಿದ್ದು, ನೀಟ್ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಸುಪ್ರೀಂ ಕೇಂದ್ರದ ಕ್ರಮವನ್ನು ಎತ್ತಿ ಹಿಡಿದು, ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸುವಂತೆ ಸೂಚಿಸಿತ್ತು.
ನಟ ಸೂರ್ಯ ಈ ವಿಷಯ ಸಂಬಂಧ ಟ್ವಿಟರ್‌ನಲ್ಲಿ ತಮಿಳಿನಲ್ಲಿ ಪತ್ರವೊಂದನ್ನು ಬರೆದು, ‘ಆತ್ಮಹತ್ಯೆ ಮಾಡಿಕೊಂಡ ಆ ಮೂರು ಕುಟುಂಬದ ದುಃಖಕ್ಕೆ ನನ್ನ ಎದೆ ಮರುಗುತ್ತಿದೆ’ ಎಂಬ ಕ್ಯಾಪ್ಶನ್‌ನೊಂದಿಗೆ ಅಪ್‌ಲೋಡ್ ಮಾಡಿದ್ದರು. ಅಲ್ಲದೆ, ಕೋರ್ಟ್ ಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯದಾನ ನೀಡುತ್ತಿವೆ. ಆದರೆ, ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಗಳನ್ನು ಮಾತ್ರ ಯಾವುದೇ ಭಯವಿಲ್ಲದೆ ತೆಗೆದುಕೊಳ್ಳಲು ಹೇಳುತ್ತಿವೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.
ಇದು ನ್ಯಾಯಾಂಗ ನಿಂದನೆಯಾಗಿದ್ದು, ಅವರ ವಿರುದ್ಧ ಕ್ರಮ ವಹಿಸುವಂತೆ ನ್ಯಾಯಮೂರ್ತಿಗಳು ಪತ್ರ ಬರೆದಿದ್ದಾರೆ. ಆದರೆ, ಸೂರ್ಯ ಅವರು ಚಾರಿಟೆಬಲ್ ಟ್ರಸ್ಟ್ ಮೂಲಕ ಮಾಡಿರುವ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುತ್ತಿದ್ದು, ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರ ಹೇಳಿಕೆಯನ್ನು ಬೇರೆ ರೀತಿಯಾಗಿ ಅರ್ಥೈಸಬಾರದು ಎಂದು ಆರು ನಿವೃತ್ತ ನ್ಯಾಯಮೂರ್ತಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.