ಅಮೃತಸರ: ಚುನಾವಣಾ ಅಧಿಕಾರಿಗಳು ಬಾಲಿವುಡ್ ನಟ ಸೋನು ಸೂದ್ ಅವರ ಕಾರ್ ಜಪ್ತಿ ಮಾಡಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನಲೆ ಮೊಗಾ ಕ್ಷೇತ್ರದ ಮತಗಟ್ಟೆಗೆ ತೆರಳುವಾಗ ಅವರ ಕಾರ್ ಜಪ್ತಿ ಮಾಡಲಾಗಿದೆ. ಮತದಾರರ ಮೇಲೆ ನಟ ಸೋನು ಸೂದ್ ಪ್ರಭಾವ ಬೀರುತ್ತಿದ್ದಾರೆ ಎಂದು ಅಕಾಲಿದಳ ಆರೋಪಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ ಜಪ್ತಿ ಮಾಡಲಾಗಿದೆ.
ಮೊಗಾ ಜಿಲ್ಲೆಯ ಮತಗಟ್ಟೆಗೆ ಪ್ರವೇಶಿಸಲು ಯತ್ನಿಸಿದ ಬಾಲಿವುಡ್ ನಟ ಸೋನು ಸೂದ್ ಅವರ ಕಾರ್ ರನ್ನು ಪಂಜಾಬ್ ಪೊಲೀಸರು ಇಂದು ವಶಪಡಿಸಿಕೊಂಡಿದ್ದಾರೆ. ಸೋನು ಸೂದ್ ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಕಾರ್ ಜಪ್ತಿ ಮಾಡಿ ಮನೆಗೆ ಕಳುಹಿಸಲಾಗಿದೆ ಎಂದು ಮೊಗಾ ಜಿಲ್ಲೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಮತದಾನದ ವೇಳೆ ಸೋನು ಸೂದ್ ಮನೆಯಿಂದ ಹೊರಗೆ ಕಾಲಿಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ನಟನ ಸಹೋದರಿ ಮಾಳವಿಕಾ ಸೂದ್ ಮೊಗಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ವರ್ಷ ಜನವರಿ 10 ರಂದು ಅವರು ಕಾಂಗ್ರೆಸ್ ಸೇರಿದ್ದಾರೆ.
ಕೆಲವು ಬೂತ್‌ಗಳಲ್ಲಿ ಹಣ ಹಂಚಲಾಗಿದೆ ಎಂಬ ವರದಿಗಳನ್ನು ಪರಿಶೀಲಿಸಲು ತಾನು ಹೊರಗೆ ಹೋಗಿದ್ದೆ ಎಂದು ಸೋನು ಸೂದ್ ಹೇಳಿದ್ದಾರೆ.
ಪ್ರತಿಪಕ್ಷಗಳು, ವಿಶೇಷವಾಗಿ ಅಕಾಲಿದಳದ ಜನರು ವಿವಿಧ ಬೂತ್‌ಗಳಲ್ಲಿ ಬೆದರಿಕೆ ಕರೆಗಳನ್ನು ನಾವು ತಿಳಿದಿದ್ದೇವೆ. ಕೆಲವು ಬೂತ್‌ಗಳಲ್ಲಿ ಹಣ ಹಂಚಲಾಗುತ್ತಿದೆ. ಆದ್ದರಿಂದ ಪರಿಶೀಲಿಸಿ ನ್ಯಾಯಸಮ್ಮತ ಚುನಾವಣೆ ನಡೆಸುವುದು ನಮ್ಮ ಕರ್ತವ್ಯ. ಅದಕ್ಕಾಗಿಯೇ ನಾವು ಹೊರಗೆ ಹೋಗಿದ್ದೆವು ಎಂದು ಸೋನು ಸೂದ್ ಹೇಳಿದರು.