ಮುಂಬೈ: ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದ ಬಾಲಿವುಡ್ ನಟಿ ಪಾಯಲ್ ಘೋಷ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಠಾವಳೆ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಕ್ಷದ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅನುರಾಗ್ ಕಶ್ಯಪ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದ ಪಾಯಲ್ ಘೋಷ್ RPI(A) ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಂತೆ ಅವರನ್ನು ಮಹಿಳಾ ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಪಾಯಲ್ ಘೋಷ್ ಮತ್ತು ಇತರರ ಪಕ್ಷ ಸೇರ್ಪಡೆಯಿಂದ ಪಕ್ಷ ಬಲಗೊಳ್ಳಲಿದೆ ಎಂದು ರಾಮದಾಸ್ ಅಠಾವಳೆ ಹೇಳಿದ್ದಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ದಲಿತರು, ಆದಿವಾಸಿಗಳು, ಗ್ರಾಮೀಣ ಜನತೆ, ಕೊಳಗೇರಿ ನಿವಾಸಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೆ ಸಹಾಯಮಾಡುತ್ತದೆ. ನೀವು ಪಕ್ಷಕ್ಕೆ ಸೇರಿದರೆ ಅನುಕೂಲವಾಗುತ್ತದೆ ಎಂದು ಪಾಯಲ್ ಘೋಷ್ ಅವರೊಂದಿಗೆ ಚರ್ಚಿಸಿದ ನಂತರ ಅವರು ಪಕ್ಷಕ್ಕೆ ಸೇರ್ಪಡೆಯಾಗಲು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ದೇಶಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದು ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧದ ಹೋರಾಟಕ್ಕೆ ಬೆಂಬಲಿಸಿದ ಪಕ್ಷದ ಮುಖ್ಯಸ್ಥರಿಗೆ ಧನ್ಯವಾದಗಳು ಎಂದು ಪಾಯಲ್ ಘೋಷ್ ತಿಳಿಸಿದ್ದಾರೆ.