ಮಾರ್ಚ್ 11 ರಂದು ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗ್ತಿದೆ. ಅಭಿಮಾನಿಗಳು ಸಿನಿಮಾ ನೋಡಲು ಥಿಯೇಟರ್ ಗಳಿಗೆ ಲಗ್ಗೆ ಇಡುತ್ತಿದ್ದಾರೆ.
ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ಈ ಚಿತ್ರವನ್ನು ಶ್ಲಾಘಿಸಿದ್ದು, ಸಿನಿಮಾ ನೋಡಲು ಪ್ರೇಕ್ಷಕರಿಗೆ ಸಲಹೆ ನೀಡಿದ್ದಾರೆ. ಈಗ ನಟ ಅಮೀರ್ ಖಾನ್ ಕೂಡ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸುವಂತೆ ತಿಳಿಸಿದ್ದಾರೆ.
ಮಾಧ್ಯಮ ಸಂವಾದದ ವೇಳೆ ಅಮೀರ್, ಪ್ರತಿಯೊಬ್ಬ ಭಾರತೀಯನೂ ಕಾಶ್ಮೀರ ಫೈಲ್ಸ್ ನೋಡಲೇಬೇಕು ಎಂದು ಹೇಳಿದ್ದಾರೆ. ಅಮೀರ್ ಖಾನ್ ಮತ್ತು ಆಲಿಯಾ ಭಟ್ ನಿನ್ನೆ ಮಾರ್ಚ್ 20 ರಂದು ದೆಹಲಿಯಲ್ಲಿ ‘RRR’ ಗಾಗಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಮಾಧ್ಯಮ ಸಂವಾದದ ಸಮಯದಲ್ಲಿ, ಅಮೀರ್ ಗೆ ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಅವರ ಅಭಿಪ್ರಾಯಗಳ ಬಗ್ಗೆ ಕೇಳಲಾಯಿತು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಮೀರ್, ಹೌದು, ನಾನು ಖಂಡಿತವಾಗಿ ನೋಡುತ್ತೇನೆ. ಕಥೆಯು ನಮ್ಮ ಇತಿಹಾಸದ ಒಂದು ಭಾಗವಾಗಿದೆ. ಕಾಶ್ಮೀರಿ ಪಂಡಿತರಿಗೆ ಸಂಬಂಧಿಸಿದ ಘಟನೆ ದುಃಖಕರವಾಗಿದೆ. ಅಂತಹ ಚಲನಚಿತ್ರವನ್ನು ಎಲ್ಲ ಭಾರತೀಯರೂ ನೋಡಬೇಕು ಎಂದಿದ್ದಾರೆ.
ಈ ಚಿತ್ರವು ಮಾನವೀಯತೆಯನ್ನು ನಂಬುವ ಎಲ್ಲ ಜನರನ್ನು ಮುಟ್ಟಿದೆ. ನಾನು ಖಂಡಿತವಾಗಿ ಚಿತ್ರವನ್ನು ನೋಡುತ್ತೇನೆ. ಚಿತ್ರ ಯಶಸ್ವಿಯಾಗಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದಿದ್ದಾರೆ.