ಅದು 1972-73 ರ ಸಂದರ್ಭ. ನನಗಾಗ ವಯಸ್ಸು 10. ಎಸ್.ಪಿ. ಬಾಲಸುಬ್ರಹ್ಮಣ್ಯಂ ನಮ್ಮೊಂದಿಗೇ ರೈಲಿನಲ್ಲಿ ಇದ್ದರು. ವಿಶಾಖಪಟ್ಟಣದಿಂದ ಚೆನ್ನೈವರೆಗೆ ಅವರ ಜೊತೆ ನಾವೂ ಪ್ರಯಾಣಿಸಿದೆವು. ಹಾಡಿ ರಂಜಿಸಿದರು. ಆದರಾಗ ಅವರು ಇಷ್ಟು ದೊಡ್ಡ ಗಾಯಕ ಎಂಬುದು ಗೊತ್ತಿರಲಿಲ್ಲ. ಅವರು ನಮ್ಮ ಹೆಮ್ಮೆ ಎಂಬುದು ಅರಿವಿಗೇ ಬಂದಿರಲಿಲ್ಲ.
ಹೀಗೆ……ಎಸ್ ಪಿ ಬಿ ಸಾವಿನ ನಂತರ ಅಭಿಮಾನಿಗಳು ತಮ್ಮ ನೆನಪುಗಳನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ.
ಐವತ್ತೇಳು ವರ್ಷದ ಖ್ಯಾತ ಉದ್ಯಮಿ ಕೆ. ವೈಥೀಸ್ವರನ್ ತಮ್ಮ ಬಾಲ್ಯದ ನೆನಪುಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ರೈಲ್ವೆ ಸಿಬ್ಬಂದಿಯಾಗಿದ್ದ ತಂದೆ ಹೌರಾದಲ್ಲಿ ಕೆಲಸ ಮಾಡುತ್ತಿದ್ದರು. ನಾವೆಲ್ಲ ಅಲ್ಲೇ ಅಪ್ಪನೊಂದಿಗೆ ಇದ್ದೆವು. ದೀಪಾವಳಿ ಹಬ್ಬಕ್ಕಾಗಿ ಚೆನ್ನೈನತ್ತ ರೈಲು ಪ್ರಯಾಣ ಮಾಡುತ್ತಿದ್ದೆವು.
ಒಂದು ದಿನದ ಪ್ರಯಾಣ ಮುಗಿದಿತ್ತು. ಎರಡನೇ ದಿನ ವಾಲ್ಟರ್ (ಇಂದಿನ ವಿಶಾಖಪಟ್ಟಣ) ಜಂಕ್ಷನ್ ತಲುಪಿತ್ತು. ಚೆನ್ನೈವರೆಗೆ ಪ್ರಯಾಣ ಮುಂದುವರಿಸುವುದಿತ್ತು. ಚಿಕ್ಕಪ್ಪನ ಕುಟುಂಬದವರು ನಮಗಾಗಿ ದೊಡ್ಡ ಊಟದ ಬುತ್ತಿ ಕಳುಹಿಸಿದ್ದರು. ಇನ್ನೇನು ರೈಲು ಹೊರಡಬೇಕು ಎನ್ನುವಾಗ ಯುವಕನೊಬ್ಬ ಓಡಿಬಂದು ರೈಲು ಹತ್ತಿ ಖಾಲಿ ಇದ್ದ ನಮ್ಮ ಬರ್ತ್ ನಲ್ಲೇ ಬಂದು ಕುಳಿತ.
ತಾನೊಬ್ಬ ಹಿನ್ನೆಲೆ ಗಾಯಕ, ತನ್ನ ಹೆಸರು ಬಾಲು, ಚೆನ್ನೈನಲ್ಲಿ ರೆಕಾರ್ಡಿಂಗ್ ಹೋಗುತ್ತಿದ್ದೇನೆ ಎಂದಷ್ಟೆ ಸರಳವಾಗಿ ಪರಿಚಯಿಸಿಕೊಂಡರು. ನಮ್ಮೊಂದಿಗೆ ಬೆರೆತು ತಮಾಷೆ ಮಾಡುತ್ತಾ ಕಾಲ ಕಳೆದರು. ಬುತ್ತಿಯ ಊಟವನ್ನು ಎಲ್ಲರೂ ಚಪ್ಪರಿಸಿ ಸವಿದೆವು. ಜೊತೆಗೆ ಎಸ್ಪಿಬಿ ನಮಗಾಗಿ ಹಾಡಿದ ಅದೆಷ್ಟೋ ಹಾಡುಗಳು ಅಂದು ಹೃನ್ಮನ ತುಂಬಿದ್ದವು. ಕಿಶೋರ್ ಕುಮಾರ್, ಮಹಮದ್ ರಫಿ ಅವರ ಹಾಡುಗಳು ಮುದ ನೀಡಿದ್ದವು. ಅಮ್ಮ ಕೂಡ ಎಸ್ಪಿಬಿ ಜತೆ ಧ್ವನಿಗೂಡಿಸಿದ್ದರು. ಇವೆಲ್ಲ ಇಂದು ನೆನಪು ಮಾತ್ರ.
ವಿಜಯವಾಡ ನಿಲ್ದಾಣದಲ್ಲಿ ಬಾಲು ಸ್ನೇಹಿತರೊಬ್ಬರು ಕೊಟ್ಟ ಊಟದ ಬುತ್ತಿಯನ್ನು ನಮ್ಮೊಂದಿಗೆ ಹಂಚಿಕೊಂಡರು. ನನಗೆ ಚಾಕೊಲೇಟ್ ಕೊಡಿಸಿದರು. ರಾತ್ರಿ ಜೇಬಿನಿಂದ ಪೇಪರ್ ಪೊಟ್ಟಣ, ಒಂದು ಚಿಕ್ಕ ಲೋಟ ತೆಗೆದು ನಮ್ಮಪ್ಪನ ಅನುಮತಿ ಕೇಳಿದರು. ಆಶ್ಚರ್ಯಪಟ್ಟು ಹಿನ್ನೆಲೆ ಗಾಯಕರು, ಗಂಟಲಿಗೆ ಏನೂ ಆಗುವುದಿಲ್ಲ ಎಂದಾಗ, ನಗುತ್ತಾ ಖಂಡಿತಾ ಏನೂ ಆಗುವುದಿಲ್ಲ. ನಾಳೆ ಪ್ರಮುಖವಾದ ರೆಕಾರ್ಡಿಂಗ್ ಇದೆ. ಒಳ್ಳೆ ನಿದ್ರೆ ಮಾಡಲು ಸಹಕಾರಿಯಾಗುತ್ತದೆ ಎಂದಿದ್ದರು.
ಚೆನ್ನೈನಲ್ಲಿ ರೈಲು ಇಳಿದಾಗ ನಾನಿನ್ನೂ ಗೊರಕೆ ಹೊಡೆಯುತ್ತಿದ್ದೆ. ಅಪ್ಪ-ಅಮ್ಮನಿಗೆ ಬೈ ಹೇಳಿ, ಮಲಗಿದ್ದ ನನ್ನ ತಲೆಸವರಿ ಹೋದ ಬಾಲು ಅವರನ್ನು ಮತ್ತೆಂದು ಸಂಧಿಸಲು ಸಾಧ್ಯವಾಗಲೇ ಇಲ್ಲ. ನಿಜಕ್ಕೂ ಅವರು ನಮ್ಮ ಹೆಮ್ಮೆ ಎಂದು ವೈಥೀಸ್ವರನ್ ಟ್ವೀಟ್ ಮಾಡಿದ್ದಾರೆ.