1912ರ ಇಸ್ವಿಯಲ್ಲಿ ಇಂಗ್ಲೆಂಡ್ನ ಸೌತ್ಹ್ಯಾಪ್ಟನ್ನಿಂದ ಅಮೆರಿಕದ ನ್ಯೂಯಾರ್ಕ್ಗೆ ಹೊರಟಿದ್ದ ವೇಳೆ ಅಪಘಾತಕ್ಕೀಡಾಗಿದ್ದ ಟೈಟಾನಿಕ್ ಹಡುಗಿನ ಬಗ್ಗೆ ಗೊತ್ತಿಲ್ಲ ಎನ್ನುವವರಿಲ್ಲ. ಮುಳುಗಲಾರದ ಹಡಗು ಎಂದೇ ಖ್ಯಾತಿ ಪಡೆದಿರುವ ಈ ಟೈಟಾನಿಕ್ ಅಪಘಾತದಲ್ಲಿ 1500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದನ್ನ ಮಾನವ ಇತಿಹಾಸದ ಭೀಕರ ಅಪಘಾತಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
1997ರಲ್ಲಿ ಜೇಮ್ಸ್ ಕ್ಯಾಮರೂನ್ ನಿರ್ದೇಶನದಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ಕೇಟ್ ವಿನ್ಸ್ಲೆಟ್ ನಾಯಕತ್ವದಲ್ಲಿ ಮೂಡಿ ಬಂದ ʼಟೈಟಾನಿಕ್ʼ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುವ ಮೂಲಕ ಈಗಲೂ ಜನಮನದಲ್ಲಿ ನೆಲೆಸಿದೆ.
ಹಡಗು ಮುಳುಗಿದ ಘಟನೆ ನಡೆದು 100 ವರ್ಷಕ್ಕೂ ಅಧಿಕ ಸಮಯವೇ ಕಳೆದಿದೆ. ಆದರೂ ಸಹ ಈ ಮುಳುಗಲಾರದ ಹಡಗು ಇನ್ನೂ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದೆ. ಈಗಲೂ ಈ ಹಡಗನ್ನ ನೆನಪಿಸಿಕೊಳ್ಳುವಂತೆ ಚೀನಾ ಮಾಡಿದೆ,
ಚೀನಾಗೆ ತೆರಳುವ ಪ್ರವಾಸಿಗರು ಶೀಘ್ರದಲ್ಲೇ ಟೈಟಾನಿಕ್ ಸೌಂದರ್ಯವನ್ನ ಕಣ್ತುಂಬಿಕೊಳ್ಳಬಹುದಾಗಿದೆ. ಬರೋಬ್ಬರಿ 155 ಮಿಲಿಯನ್ ಡಾಲರ್ ವೆಚ್ಚದಲ್ಲಿ ಟೈಟಾನಿಕ್ ಹಡಗಿನ ಪ್ರತಿಕೃತಿಯನ್ನ ನಿರ್ಮಿಸಲಾಗುತ್ತಿದೆ.
ಸು ಶೌಜಾನ್ ಎಂಬವರು ಟೈಟಾನಿಕ್ ಸಿನಿಮಾ ಹಾಗೂ ಅದರ ಕತೆಯ ಬಹುದೊಡ್ಡ ಅಭಿಮಾನಿಯಾಗಿದ್ದಾರೆ. ಅವರೇ ಇದೀಗ ಟೈಟಾನಿಕ್ ಸಿನಿಮಾದ ಪ್ರತಿಕೃತಿಯನ್ನ ನಿರ್ಮಾಣ ಮಾಡ್ತಿದ್ದಾರೆ. ಸಿಚುವಾನ್ ಎಂಬಲ್ಲಿ 850 ಅಡಿ ಉದ್ದ ಟೈಟಾನಿಕ್ ಹಡಗು ನಿರ್ಮಾಣವಾಗುತ್ತಿದೆ.
ಸು ನೀಡಿದ ಮಾಹಿತಿಯ ಪ್ರಕಾರ, ಈ ಟೈಟಾನಿಕ್ ಹಡಗಿನಲ್ಲಿ ಸುಂದರ ರಾತ್ರಿಯನ್ನ ಕಳೆಯಲು 2000 ಯಾನ್ ಖರ್ಚು ಮಾಡಬೇಕು. ಟೈಟಾನಿಕ್ ಪ್ರತಿಕೃತಿಯು ಇಂಜಿನ್ಗಳನ್ನ ಹೊಂದಿದ್ದರೂ ಸಹ ಇದು ನೌಕಾಯಾನವನ್ನ ಮಾಡೋದಿಲ್ಲ.