ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದರು. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಹಿನ್ನೆಲೆ ನಿಜಕ್ಕೂ ಇಡೀ ಚಿತ್ರರಂಗವೇ ಬೆಚ್ಚಿ ಬಿದ್ದಿದೆ. ಸುಶಾಂತ್ ಸಿಂಗ್ ಈ ರೀತಿ ಮಾಡಿಕೊಂಡಿದ್ದಾರೆ ಎಂಬುದನ್ನೇ ಅರಗಿಸಿಕೊಳ್ಳಲಾಗುತ್ತಿಲ್ಲ ಎನ್ನುತ್ತಿದ್ದಾರೆ.
ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನಿಖರವಾದ ಕಾರಣ ಬಹಿರಂಗವಾಗಿಲ್ಲವಾದರೂ, ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿ ಬಂದಿದೆ. ಯಶಸ್ವಿ ನಟನಾಗಿದ್ದರೂ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವುದರ ಹಿಂದಿನ ಸತ್ಯವೇನು ಎಂಬುದು ಬಿಟೌನ್‌ನಲ್ಲಿ ಚರ್ಚೆಯಾಗ್ತಿದೆ.
ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೇ ಇದೀಗ ಅನೇಕ ಆರೋಪಗಳು ಹಲವಾರು ಮಂದಿಯ ವಿರುದ್ಧ ಕೇಳಿ ಬಂದಿದ್ದವು. ಈ ಸಂಬಂಧ ಇದೀಗ ಬಾಲಿವುಡ್‌ನ ಒಟ್ಟು 8 ಮಂದಿ ದಿಗ್ಗಜರ ಮೇಲೆ ಕೇಸ್ ದಾಖಲಾಗಿದೆ. ನಟ ಸಲ್ಮಾನ್ ಖಾನ್, ನಿರ್ಮಾಪಕ ಕರಣ್ ಜೋಹರ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಏಕ್ತಾ ಕಪೂರ್ ಸೇರಿ ಎಂಟು ಜನರ ವಿರುದ್ಧ ಕೇಸ್ ದಾಖಲಾಗಿದೆ.
ಬಿಹಾರ ಮೂಲಕ ಸುಧೀರ್ ಕುಮಾರ್ ಓಜಾ ಎಂಬುವವರು ಈ ಎಂಟು ಮಂದಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 306, 109, 504 & 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸುಶಾಂತ್‌ರನ್ನು ಸುಮಾರು 7 ಸಿನಿಮಾಗಳಿಂದ ಕೈಬಿಡಲಾಗಿತ್ತು. ಅಲ್ಲದೆ, ಕೆಲ ಸಿನಿಮಾಗಳು ಕೂಡ ಬಿಡುಗಡೆಗೊಂಡಿರಲಿಲ್ಲ. ಇಂತಹ ಪರಿಸ್ಥಿತಿಗಳಿಂದಾಗಿಯೇ ನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಓಝಾ ಪ್ರತಿಕ್ರಿಯಿಸಿದ್ದಾರೆ.