2025ರ ವೇಳೆಗೆ ಇಡೀ ಸ್ಯಾಂಡಲ್ ವುಡ್ ಹಾಳಾಗಿ ಬಿಡುತ್ತೆ. ಬಹುತೇಕರು ಅಲ್ಲಲ್ಲೇ ಕುಡಿದು ಅಲ್ಲಲ್ಲೇ ಬೀಳ್ತಾರೆ ಎಂದು ನಿರ್ದೇಶಕ ರವಿ ಶ್ರೀವತ್ಸ ಹೇಳಿಕೆ ನೀಡಿದ್ದಾರೆ.
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರವಿ ಶ್ರೀವತ್ಸ, ಈಗ ಡಾ.ರಾಜ್ ಕುಮಾರ್, ವಿಷ್ಣು ವರ್ಧನ್ ಅವರಿದ್ದ ಚಿತ್ರರಂಗವಾಗಿ ಇಲ್ಲ. ಈಗಿನವರಿಗೆ ಸಿನಿಮಾ ಎಂದರೆ ಏನೆಂಬುದೇ ಗೊತ್ತಿಲ್ಲ. ಹಿಂದಿನ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ತುಂಬಾ ಬದಲಾವಣೆಗಳಾಗಿವೆ. 2025ರ ವೇಳೆಗೆ ಸ್ಯಾಂಡಲ್ ವುಡ್ ಸಂಪೂರ್ಣ ಹಾಳಾಗಿ ಬಿಡುತ್ತೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗ ಪವಿತ್ರ ಜಾಗ. ಅದೀಗ ವಿಷಪೂರಿತವಾಗುತ್ತಿದೆ. ಇದನ್ನು ನೋಡಲು ಈಗ ತುಂಬಾ ಬೇಸರವಾಗುತ್ತದೆ. ಇನ್ನೂ ಎಷ್ಟು ಸಾವು-ನೋವು ಸಂಭವಿಸಬೇಕೋ ಗೊತ್ತಿಲ್ಲ. ಆದರೆ ಈ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದ್ದಾರೆ.