ಬೆಂಗಳೂರು: ಹಣ, ಹೆಸರು ಮಾಡುವ ಉದ್ದೇಶದಿಂದಾಗಿ ಹಲವು ಯುವ ನಟ – ನಟಿಯರು ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಹೇಳುವ ಮೂಲಕ ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟಿದೆ ಎಂಬ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುಳಿವು ನೀಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಹಲವಾರು ಚಿತ್ರರಂಗದಲ್ಲಿ ಅದರಲ್ಲೂ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡ ಡ್ರಗ್ಸ್ ಸೇವಿಸುತ್ತಿದ್ದರು ಎಂಬ ಆರೋಪವಿದೆ. ಚಿತ್ರರಂಗದಲ್ಲಿ ಡ್ರಗ್ಸ್ ಜಾಲಕ್ಕೆ ಹಲವರು ಸಿಲುಕಿರುವ ಬಗ್ಗೆ ಮಾಹಿತಿಯಿದೆ. ನಟಿ ಕಂಗನಾ ರಣಾವತ್ ಹೇಳುವಂತೆ ನನಗೂ ಕೂಡ ರಕ್ಷಣೆ ನೀಡಿದರೆ ಸ್ಯಾಂಡಲ್ ವುಡ್ ನಟ – ನಟಿಯರ ಬಗ್ಗೆ ಮಾಹಿತಿ ಬಹಿರಂಗ ಮಾಡಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ಚಿತ್ರರಂಗಕ್ಕೆ ಬಂದು ಸಡನ್ ಆಗಿ ಜನಪ್ರಿಯರಾಗುತ್ತಾರೆ. ಇಂತವರು ಹಲವಾರು ಪಾರ್ಟಿ, ರೇವ್ ಪಾರ್ಟಿಗಳಲ್ಲಿ ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಹೆಸರು, ಹಣ ಗಳಿಸಿ ಬೇಗನೇ ಖ್ಯಾತಿ ಪಡೆಯುವ ಕಾರಣಕ್ಕಾಗಿ ಈ ರೀತಿ ಡ್ರಗ್ಸ್ ಜಾಲದಲ್ಲಿ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಡ್ರಗ್ಸ್ ಮಾಫಿಯಾದಿಂದಲೇ ಹಲವರು ಖ್ಯಾತಿ, ಹಣ ಗಳಿಸಿದ್ದಾರೆ. ಈ ಬಗ್ಗೆ ಸಮಗ್ರವಾದ ತನಿಖೆಗಳಾಗಬೇಕು ಹಾಗೂ ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕಿದೆ ಎಂದು ತಿಳಿಸಿದ್ದಾರೆ.