ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಮಧ್ಯೆ, ಇದು ಈಗ ಮುಂಬೈ ಪೊಲೀಸರು ಹಾಗೂ ಪಾಟ್ನಾ ಪೊಲೀಸರ ನಡುವೆ ಜಟಾಪಟಿಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಹೆಸರು ಥಳಕು ಹಾಕಿಕೊಂಡಿರುವ ನಟಿ ರಿಯಾ ಚಕ್ರವರ್ತಿಯನ್ನು ವಿಚಾರಣೆ ಮಾಡಲು ಮುಂಬೈಗೆ ತೆರಳಿದ್ದ ಪಾಟ್ನಾ ಪೊಲೀಸರನ್ನೇ ಈಗ ಕ್ವಾರಂಟೈನ್ ಮಾಡಿರುವುದು ಹೊಸ ವಿವಾದ ಸೃಷ್ಟಿಸಿದೆ.
ಬಿಹಾರದ ವಿಶೇಷ ತನಿಖಾ ದಳದ ಮುಖ್ಯಸ್ಥ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ನೇತೃತ್ವದ ತಂಡ ಮುಂಬೈಗೆ ತೆರಳಿದ್ದು, ಈ ವೇಳೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ.
ಈ ವಿಚಾರ ಈಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳನ್ನು ಬಿಡುಗಡೆ ಮಾಡಲು ಮಾತುಕತೆ ನಡೆಸಲಾಗುತ್ತಿದೆ.
ಇದರ ಮಧ್ಯೆ ಮುಂಬೈ ಪೊಲೀಸ್ ಆಯುಕ್ತ ಪರಮವೀರ್ ಸಿಂಗ್, ಸಾಯುವ ಮುನ್ನ ಸುಶಾಂತ್ ಸಿಂಗ್ ರಜಪೂತ್ ಗೂಗಲ್ನಲ್ಲಿ ನೋವಿಲ್ಲದೆ ಸಾಯುವ ವಿಧಾನದ ಕುರಿತು ಹುಡುಕಾಡಿದ್ದರು. ಜೊತೆಗೆ ತಮ್ಮ ಮಾಜಿ ಮ್ಯಾನೇಜರ್ ದಿಶಾ ಸಾವಿನೊಂದಿಗೆ ತಮ್ಮ ಹೆಸರನ್ನು ಪ್ರಸ್ತಾಪಿಸಿರುವ ವರದಿಗಳ ಕುರಿತು ಹುಡುಕಾಟ ನಡೆಸಿದ್ದರು ಎಂದು ಹೇಳಿದ್ದಾರೆ. ಈ ಎಲ್ಲದರ ನಡುವೆ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಪಿ. ಸಿಂಗ್, ಮುಂಬೈ ಪೊಲೀಸರಿಗೆ ತನಿಖೆ ಕೋರಿ ಹಿಂದೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪಾಟ್ನಾ ಪೊಲೀಸರ ತನಿಖೆ ವೇಳೆ ನಮಗೆ ನ್ಯಾಯ ಸಿಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.