ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮುಂಬೈ ಪೊಲೀಸರ ತನಿಖೆ ತೀವ್ರಗೊಂಡಿದೆ. ಶುಕ್ರವಾರ ಸಂಜೆ ಯಶ್ ರಾಜ್ ಫಿಲ್ಮ್ಸ್ ಮಾಲೀಕ ಆದಿತ್ಯ ಚೋಪ್ರಾ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಸುಶಾಂತ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಇದುವರೆಗೆ 38 ಜನರ ವಿಚಾರಣೆ ನಡೆದಿದೆ.
ಬಾಂದ್ರಾ ಪೊಲೀಸ್ ತನಿಖಾ ತಂಡವು ಆದಿತ್ಯ ಚೋಪ್ರಾ ಅವರ ಹೇಳಿಕೆಯನ್ನು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದೆ. ಅವರನ್ನು 2 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಇಬ್ಬರು ವಕೀಲರ ಜೊತೆ ಆದಿತ್ಯ ಚೋಪ್ರಾ ಠಾಣೆಗೆ ಬಂದಿದ್ದರು.
ಆದಿತ್ಯ ಚೋಪ್ರಾ ಅವರ ಬ್ಯಾನರ್ ಅಡಿಯಲ್ಲಿ ಸುಶಾಂತ್ ಮೂರು ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿದ್ದರು. ಎರಡು ಚಿತ್ರದಲ್ಲಿ ನಟಿಸಿದ್ದ ಸುಶಾಂತ್ ಗೆ ಮೂರನೇ ಚಿತ್ರ ಕೈತಪ್ಪಿ ಹೋಗಿತ್ತು.
ಪಾನಿ ಚಿತ್ರದ ಸಿದ್ಧತೆಯಲ್ಲಿದ್ದ ಸುಶಾಂತ್ ಗೆ ಈ ವೇಳೆ ಸಂಜಯ್ ಲೀಲಾ ಬನ್ಸಾಲಿಯ ನಾಲ್ಕು ಚಿತ್ರಗಳು ಕೈತಪ್ಪಿದ್ದವು. ಕತ್ರಿನಾ ಜೊತೆ ಫಿತೂರ್ ಕೈತಪ್ಪಿತ್ತು. ಬೆಫಿಕ್ರೆ ಕೂಡ ಸುಶಾಂತ್ ಕೈತಪ್ಪಿ ರಣವೀರ್ ಸಿಂಗ್ ಪಾಲಾಗಿತ್ತು. ಕೈ ತಪ್ಪಿದ ಚಿತ್ರಗಳಿಂದ ಸುಶಾಂತ್ ಒತ್ತಡಕ್ಕೊಳಗಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.