ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ದಿನಕ್ಕೊಂದು ಹೇಳಿಕೆಗಳು ಅನುಮಾನವನ್ನು ಹುಟ್ಟಿಸುತ್ತಿವೆ. ಸಿಬಿಐಗೆ ಈ ಕೇಸ್ ಹಸ್ತಾಂತರ ಆದ ಮೇಲಂತೂ ಅನೇಕ ವಿಚಾರಗಳು ಹೊರ ಬೀಳುತ್ತಿವೆ. ಸಿಬಿಐ ಈ ಕೇಸ್ ವಿಚಾರಣೆಯನ್ನು ಕಠಿಣ ಮಾಡಿದೆ. ಸುಶಾಂತ್ ಸಿಂಗ್ ಸಂಪರ್ಕದಲ್ಲಿದ್ದ ಎಲ್ಲರನ್ನೂ ವಿಚಾರಣೆ ಮಾಡಲಾಗುತ್ತಿದೆ.
ಇನ್ನು ಸುಶಾಂತ್ ಸಿಂಗ್ ಫ್ಲಾಟ್‌ಮೇಟ್‌ಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸಲಾಗಿದೆ. ಸುಶಾಂತ್‌ರ ಮನೆ ಕೆಲಸದ ನೀರಜ್, ಕೇಶವ್, ದೀಪೇಶ್ ಸಾವಂತ್ ಮತ್ತು ಅವರ ಸ್ನೇಹಿತ ಸಿದ್ಧಾರ್ಥ್ ಸೇರಿ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಈ ನಾಲ್ಕು ಮಂದಿ ಸುಶಾಂತ್ ಸಾವಿನ ಹಿಂದಿನ ದಿನದ ಬಗ್ಗೆ ಸಿಬಿಐಗೆ ಮಾಹಿತಿ ನೀಡಿದ್ದಾರೆ.
ಸುಶಾಂತ್ ಸಾಯುವ ಹಿಂದಿನ ದಿನ ಹಾಗೂ ಅವರು ಸಾಯುವ ದಿನದಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ತಿಳಿಸಿದ್ದಾರೆ. ಸುಶಾಂತ್, ಸಾಯುವ ಹಿಂದಿನ ರಾತ್ರಿಯಿಂದ ಊಟ ಸೇವಿಸಿರಲಿಲ್ಲವಂತೆ. ಬೆಳಗ್ಗೆ ಬೇಗನೆ ಸುಶಾಂತ್ ಎದ್ದಿದ್ದರಂತೆ. 9.15 ಕ್ಕೆ ದಾಳಿಂಬೆ ಜ್ಯೂಸ್ ಹಾಗು ಎಳನೀರು ಕೇಳಿದ್ದರಂತೆ ಸುಶಾಂತ್.
ಇದಾದ ನಂತರ ರೂಂ ಬಾಗಿಲು ಲಾಕ್ ಆಗಿದೆ. ಮಧ್ಯಾಹ್ನ ಅಡುಗೆ ಏನು ಮಾಡಬೇಕು ಎಂಬುದನ್ನು ಕೇಳಲು ದೀಪೇಶ್ ರೂಮ್ ಬಳಿ ಹೋದಾಗ ಬಾಗಿಲು ಲಾಕ್ ಆಗಿದ್ದರಿಂದ ನಾಲ್ಕು ಜನ ಗಾಬರಿಯಾಗಿದ್ದಾರೆ. ತೆಗೆಯಲು ಪ್ರಯತ್ನ ಕೂಡ ಮಾಡಿದ್ದಾರೆ. ಆದರೆ ಪ್ರಯತ್ನ ಸಫಲವಾಗದೇ ಕೀ ರಿಪೇರಿ ಮಾಡುವವನನ್ನು ಕರೆಸಿ ಬಾಗಿಲು ತೆರೆಯಲಾಯ್ತು. ಒಳ ಹೋಗಿ ನೋಡಿದರೆ ಸುಶಾಂತ್ ನೇಣು ಬಿಗಿದುಕೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.