ಕೊರೊನಾ ವೈರಸ್ ನಿರೋಧಕ ಲಸಿಕೆಗಳನ್ನು ತೆಗೆದುಕೊಂಡ ಮಂದಿ ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಅಮೆರಿಕದ ಥಿಯೇಟರ್ ಸಮೂಹಗಳು ತಿಳಿಸಿವೆ. ಎಎಂಸಿ ಎಂಟರ್ಟೇನ್‌ಮೆಂಟ್, ಸಿನೆಮಾರ್ಕ್ ಮತ್ತು ರೀಗಲ್ ಸಿನೆಮಾಸ್ ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಲಸಿಕೆ ಹಾಕಿಸಿಕೊಳ್ಳದ ಮಂದಿ ಮಾಸ್ಕ್ ಧರಿಸುವುದನ್ನು ಮುಂದುವರೆಸಬೇಕಿದ್ದು, ಸಾಮಾಜಿಕ ಅಂತರ ಹಾಗೂ ಸ್ವಚ್ಛತಾ ಕ್ರಿಯೆಗಳ ಮಾರ್ಗಸೂಚಿಗಳು ಮುಂದುವರೆಯಲಿವೆ ಎಂದು ತಿಳಿಸಿದೆ.
“ಸಿಡಿಸಿ ಮಾರ್ಗಸೂಚಿಗಳ ಅನುಸಾರ, ಪೂರ್ಣವಾಗಿ ಲಸಿಕೆ ಪಡೆದಿರುವ ಮಂದಿ ಮಾಸ್ಕ್‌ಗಳನ್ನು ಧರಿಸುವ ಅಗತ್ಯವಿಲ್ಲ” ಎಂದು ಎಎಂಸಿ ತಿಳಿಸಿದ್ದು, “ನೀವು ಪೂರ್ಣವಾಗಿ ಲಸಿಕೆ ಪಡೆದಿಲ್ಲವಾದರೆ, ಥಿಯೇಟರ್‌ನಲ್ಲಿರುವಷ್ಟೂ ಸಮಯ, ಆಹಾರ & ಪಾನೀಯ ಸೇವನೆ ಮಾಡುವ ಸಂದರ್ಭ ಹೊರತುಪಡಿಸಿ, ಮಾಸ್ಕ್‌ಗಳನ್ನು ಧರಿಸಲು ಕೋರುತ್ತೇವೆ” ಎಂದು ತಿಳಿಸಿದೆ.
ಮಾಸ್ಕ್ ಧರಿಸುವ ಸಂಬಂಧ ಇಂಥದ್ದೇ ಅಪ್ಡೇಟ್‌ಗಳನ್ನು ರೀಗಲ್ ಹಾಗೂ ಸಿನಿಮಾರ್ಕ್‌ಗಳು ತಮ್ಮ ಜಾಲತಾಣಗಳಲ್ಲಿ ಪ್ರಕಟಿಸಿ, ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರಗಳನ್ನು ಉಲ್ಲೇಖಿಸಿವೆ.