ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ವಿಚಾರ ಮಹಾರಾಷ್ಟ್ರ ಹಾಗೂ ಬಿಹಾರ ಸರ್ಕಾರಗಳ ನಡುವಿನ ತಿಕ್ಕಾಟಕ್ಕೂ ಕಾರಣವಾಗಿದ್ದು, ಮುಂಬೈ ಪೊಲೀಸರ ತನಿಖೆ ಜೊತೆಗೆ ಬಿಹಾರ ಸರ್ಕಾರದ ಶಿಫಾರಸಿನಂತೆ ಸಿಬಿಐ ಕೂಡ ತನಿಖೆ ಕೈಗೆತ್ತಿಕೊಂಡಿದೆ.
ಇದರ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ಬ್ಯಾಂಕ್ ಖಾತೆಯಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಆತನ ಗೆಳತಿ ರಿಯಾ ಚಕ್ರವರ್ತಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂಬ ವಿಚಾರದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ರಿಯಾ ಚಕ್ರವರ್ತಿ ಈಗಾಗಲೇ ಎರಡು ಬಾರಿ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗಾಗಿ ಹಾಜರಾಗಿದ್ದಾರೆ.
ಈ ಸಂದರ್ಭದಲ್ಲಿ ರಿಯಾ ಚಕ್ರವರ್ತಿ ಮುಂಬೈನಲ್ಲಿ ತಮ್ಮ ಹಾಗೂ ಕುಟುಂಬದ ಹೆಸರಿನಲ್ಲಿ ಐಷಾರಾಮಿ ಫ್ಲಾಟ್ ಗಳನ್ನು ಹೊಂದಿರುವುದು ಬೆಳಕಿಗೆ ಬಂದಿದ್ದು, ಆದರೆ ಆಕೆಯ ಆದಾಯ ಹಾಗೂ ಖರೀದಿಸಿರುವ ಆಸ್ತಿ ಮೌಲ್ಯಕ್ಕೆ ಯಾವುದೇ ತಾಳೆಯಾಗುತ್ತಿಲ್ಲವೆನ್ನಲಾಗಿದೆ. ಇದರಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಅಚ್ಚರಿಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮತ್ತಷ್ಟು ವಿಚಾರಣೆ ನಡೆಸಲು ಮುಂದಾಗಿದ್ದಾರೆ.