
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಭಿನ್ನಮತ ಸ್ಫೋಟಗೊಳ್ಳುತ್ತಿದ್ದಂತೆಯೇ ರಾಹುಲ್ ಗಾಂಧಿಗೆ ಬೆಂಬಲ ವ್ಯಕಪಡಿಸಿರುವ ಮಾಜಿ ಸಂಸದೆ ರಮ್ಯಾ, ಕೆಲ ಕಾಂಗ್ರೆಸ್ ನಾಯಕರು ಪತ್ರವನ್ನು ಸೋರಿಕೆ ಮಾಡಿದ್ದು ಮಾತ್ರವಲ್ಲ ಸಿಡಬ್ಲ್ಯುಸಿ ಸಭೆಯ ಇಂಚಿಂಚೂ ಮಾಹಿತಿಯನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿಡಬ್ಲ್ಯೂಸಿ ಸಭೆಯಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ನ 23 ಹಿರಿಯ ನಾಯಕರ ಪತ್ರ ವ್ಯವಹಾರಕ್ಕೆ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಸೂಚನೆಯಂತೆ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದ್ದರು. ಇದು ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಳ್ಳಲು ಕಾರಣವಾಗಿತ್ತು.
ಈ ವೇಳೆ ಟ್ವೀಟ್ ಮಾಡಿರುವ ನಟಿ ರಮ್ಯಾ, ಬಂಡಾಯವೆದ್ದಿರುವ ಕಾಂಗ್ರೆಸ್ ಹಿರಿಯ ನಾಯಕರು ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಮಾತ್ರವಲ್ಲ ಸಿಡಬ್ಲೂಸಿ ಸಭೆಯ ಸಂಪೂರ್ಣ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ರಾಹುಲ್ ಜಿ ತಪ್ಪು ಮಾಡಿದ್ದಾರೆ. ಪತ್ರ ಬರೆದಿರುವ 23 ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಮಾಧ್ಯಮಗಳ ಜತೆ ನಂಟು ಹೊಂದಿದ್ದಾರೆ ಎಂದು ಹೇಳಬೇಕಿತ್ತು ಎಂದಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ರಾಜಕೀಯದಿಂದ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದ ನಟಿ ರಮ್ಯಾ ಇದೀಗ ಸಿಡಬ್ಲ್ಯೂಸಿ ಸಭೆಯಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟಗೊಳ್ಳುತ್ತಿದ್ದಂತೆ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.