
ಸದಾ ಸಿನಿಮಾ ವಿಚಾರವಾಗಿ ಸುದ್ದಿಯಾಗುತ್ತಿದ್ದ ರಾಜಮೌಳಿ ಇದೀಗ ಆರೋಪ ಒಂದಕ್ಕೆ ಗುರಿಯಾಗಿದ್ದಾರೆ. ಕನ್ನಡದ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ತೆಲುಗಿನ ಸ್ಟಾರ್ ನಿರ್ದೇಶಕ ರಾಜಮೌಳಿ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಸಮಯ ಬಂದಾಗ ಮಾತ್ರ ಕನ್ನಡಿಗ ಎಂದು ಪ್ರಚಾರಕ್ಕಾಗಿ ಹೇಳಿಕೊಳ್ಳುವ ರಾಜಮೌಳಿ ಅವರಿಗೆ ಕನ್ನಡಿಗರ ಬಗ್ಗೆ ಯಾವ ಪ್ರೀತಿಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೂ ಪ್ರಚಾರ ಬೇಕು, ಕನ್ನಡಿಗನಾಗಿ ಒಂದಷ್ಟು ಹರುಕು ಮುರುಕು ತೆಲುಗು ಮಿಶ್ರಿತ ಕನ್ನಡ ಪದಗಳನ್ನು ಆಡುತ್ತಾರೆ. ಡಾ. ರಾಜ್ ಕುಮಾರ್ ಅವರ ರಾಜಾ ನನ್ನ ರಾಜಾ ಮತ್ತು ಮಯೂರ ಸಿನಿಮಾಗಳಿಂದ ಹಾಗೂ ಕೆಲವು ಕಾದಂಬರಿಗಳಿಂದ ಕಥೆಗಳನ್ನು ಕದಿಯುತ್ತಾರೆ ಎಂದು ಗುರುತರವಾದ ಆರೋಪವನ್ನು ರಾಜೇಂದ್ರ ಸಿಂಗ್ ಬಾಬು, ರಾಜಮೌಳಿ ಮೇಲೆ ಮಾಡಿದ್ದಾರೆ.
ಸಿನಿಮಾಗಾಗಿ ಮಾತ್ರ ಕರ್ನಾಟಕ ಬೇಕು ಆದರೆ ನಮ್ಮ ರಾಜ್ಯದ ಕಷ್ಟಕ್ಕೆ ಇವರು ಆಗುವುದಿಲ್ಲ. ಕೊರೊನಾ ಸಂಕಷ್ಟದ ಸಮಯದಲ್ಲಿ ಅವರಿಗೆ ಕರ್ನಾಟಕದ ಜನರ ಬಗ್ಗೆ ಯಾವುದೇ ಅನುಕಂಪ ಇರಲಿಲ್ಲ. ಹಾಗೆಯೇ ಯಾವ ಸಹಾಯವನ್ನೂ ಮಾಡಲಿಲ್ಲ. ಇವರೊಬ್ಬ ಅವಕಾಶವಾದಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
