ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾದಾಗ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಟೀಕಿಸಿದ್ದ ಖ್ಯಾತ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಇದೀಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮುಗಿಲು ಮುಟ್ಟಿದ್ದರೂ ಸಹ ಮೌನವಾಗಿರುವುದೇಕೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಲೆ ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಹೆದರಿಕೊಂಡು ಈ ನಟರು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿರುವ ನಾನಾ ಪಟೋಲೆ, ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಹೀಗಾಗಿ ಆಗಿನ ಸರ್ಕಾರದ ನಿಲುವಿನ ವಿರುದ್ಧ ಖ್ಯಾತನಾಮರು ಯಾವುದೇ ಅಂಜಿಕೆಯಿಲ್ಲದೆ ಧ್ವನಿಯೆತ್ತಿದ್ದರು ಎಂದು ವ್ಯಾಖ್ಯಾನಿಸಿದ್ದಾರೆ.
ಹಿಂದಿನ ಸರ್ಕಾರಗಳು ಎಸಗಿದ್ದ ಪ್ರಮಾದವನ್ನು ಸರಿಪಡಿಸುತ್ತಿದ್ದೇವೆ: ಪ್ರಧಾನಿ ಮೋದಿ ಹೇಳಿಕೆ
ಈಗಲಾದರೂ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಏರಿಕೆಯಾಗುತ್ತಿರುವ ತೈಲಬೆಲೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಅವರ ಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ. ಅಲ್ಲದೆ ಅವರುಗಳ ಚಿತ್ರ ಪ್ರದರ್ಶನಕ್ಕೆ ಸಹ ಅವಕಾಶ ನೀಡುವುದಿಲ್ಲ ಎಂದು ನಾನಾ ಪಟೋಲೆ ಗುಡುಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲವೊಂದು ವಿಷಯಗಳಿಗೆ ಖ್ಯಾತನಾಮರ ಮೇಲೆ ಒತ್ತಡ ಹೇರುತ್ತಿದೆ ಎಂದು ನಾನಾ ಪಟೋಲೆ ಆರೋಪಿಸಿದ್ದಾರೆ.