ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಇಂದು ಮಧ್ಯಾಹ್ನ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕೊರೊನಾ ಅಟ್ಟಹಾಸ ನಡೆಸುತ್ತಿರುವ ಈ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರ ಸಾವು ಊಹಾಪೋಹಗಳಿಗೆ ಕಾರಣವಾಗಿತ್ತು.
ಉಸಿರಾಟದ ತೊಂದರೆಯಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಕೊರೊನಾ ಸೋಂಕು ತಗುಲಿರಬಹುದೆಂಬ ಊಹಾಪೋಹ ಹರಡಿತ್ತು. ಹೀಗಾಗಿ ಚಿರಂಜೀವಿ ಸರ್ಜಾ ಅವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು.
ಇದೀಗ ಗಂಟಲು ದ್ರವ ಪರೀಕ್ಷಾ ವರದಿ ಹೊರಬಿದ್ದಿದ್ದು, ಚಿರಂಜೀವಿ ಸರ್ಜಾ ಅವರಿಗೆ ಕೊರೊನಾ ಸೋಂಕು ತಗುಲಿರಲಿಲ್ಲವೆಂದು ತಿಳಿದುಬಂದಿದೆ. ತೀವ್ರ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.