ಬೆಂಗಳೂರು: ಇತ್ತೀಚೆಗೆ ತಮಿಳುನಾಡಿನಲ್ಲಿ ಕಿಡಿಗೇಡಿಗಳು ಟೈಯರ್ ಗೆ ಬೆಂಕಿ ಹಚ್ಚಿ ಆನೆ ಮೇಲೆ ಎಸೆದು ಹತ್ಯೆ ಮಾಡಿದ್ದರು. ಮಾನವನ ಈ ಕ್ರೂರ ಅಟ್ಟಹಾಸ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತಲ್ಲದೇ ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ವನ್ಯಜೀವಿಗಳಿಗೆ ಹಿಂಸೆ ನೀಡುವ ದುಷ್ಕರ್ಮಿಗಳ ವಿರುದ್ಧ ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆನೆಗೆ ಹಿಂಸೆ ನೀಡಿ ಸಾಯಿಸಿರುವ ಫೋಟೊ ಶೇರ್ ಮಾಡಿರುವ ರಮ್ಯಾ, ಮನುಷ್ಯ ಯಾಕಿಷ್ಟು ಕ್ರೂರಿ? ಪ್ರತಿಯೊಂದು ಜೀವಿಯೂ ಭೂಮಿಯನ್ನೇ ಆಶ್ರಯಿಸಿರುವಾಗ ಎಲ್ಲರೂ ಶಾಂತಿ ನೆಮ್ಮದಿಯಿಂದ ಜೀವಿಸಬೇಕೆಂಬುದನ್ನು ಯಾವಾಗ ಕಲಿಯುತ್ತೇವೆ? ನನ್ನ ಹೃದಯವಿಂದು ಅಳುತ್ತಿದೆ.. ಈ ಪ್ರಪಂಚದಲ್ಲಿ ಮನುಷ್ಯರಿಗಿಂತ ಕೆಟ್ಟ ಜೀವಿ ಬೇರೊಂದಿಲ್ಲ. ಈಗಾಗಲೇ ನಾವು ವನ್ಯಜೀವಿಗಳ ಆಹಾರ, ನೆಲೆ ಎಲ್ಲವನ್ನೂ ಕಿತ್ತುಕೊಂಡಿದ್ದೇವೆ. ದಯವಿಟ್ಟು ಝೂಗಳನ್ನಾದರೂ ಅವರಿಗೆ ಬಿಡಿ. ಯಾರೂ ಕೂಡ ಝೂಗಳಿಗೆ ಹೋಗಿ ಪ್ರಾಣಿಗಳಿಗೆ ತೊಂದರೆ ನೀಡಬೇಡಿ ಎಂದು ಹೇಳಿದ್ದಾರೆ.
ಪ್ರಾಣಿಗಳಿಗೆ ನಮ್ಮನ್ನು ನೋಡಬೇಕು ಎಂಬ ಇಷ್ಟವಿಲ್ಲ. ನಿಮಗೆ ಪ್ರಾಣಿಗಳನ್ನು ಗೌರವಿಸಬೇಕು ಎಂದಿದ್ದರೆ ಮೃಗಾಲಯಗಳಿಗೆ ಹೋಗಿ ಅವುಗಳ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿ ಗೌರವಿಸಬೇಕಿಲ್ಲ. ಅವುಗಳನ್ನು ಅವರ ಪಾಡಿಗೆ ನೆಮ್ಮದಿಯಾಗಿ ಬದುಕಲು ಬಿಡಿ. ನೀವು ಏಕಾಗ್ರತೆಗಾಗಿ ಝೂಗಳಿಗೆ, ಕಾಡಿಗೆ, ಹೋಗುತ್ತೀರ ಎನ್ನುವುದಾದರೆ ಏಕಾಗ್ರತೆ ಎಂಬುದು ಅಲ್ಲಿಗೆ ಹೋಗುವುದರಿಂದ ಬರುವುದಿಲ್ಲ. ಅದು ನಿಮ್ಮ ಮನಸ್ಸಿಲ್ಲಿಯೇ ಇದೆ, ನೀವೇ ಅದನ್ನು ಕಂಡುಕೊಳ್ಳಬೇಕು ಹೊರತು ಪರ್ವತ, ಸಮುದ್ರ, ಕಾಡು ಸುತ್ತುವುದರಿಂದ, ಬೇರೆ ಜೀವಿಗಳ ಸ್ವಾತಂತ್ರ್ಯ ಹರಣಮಾಡುವುದರಿಂದ ಏಕಾಗ್ರತೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.