ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಈಗಾಗಲೇ ತನಿಖೆ ಹಂತದಲ್ಲಿದೆ. ಸುಶಾಂತ್ ಸಿಂಗ್ ಜೂನ್ 14 ರಂದು ಬಾಂದ್ರಾದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಾಥಮಿಕ ವರದಿ ಹಾಗೂ ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಎಂದು ತಿಳಿದು ಬಂದಿದ್ದರೂ, ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿರುವ ಕಾರಣ ಬಾಲಿವುಡ್ ಸೆಲೆಬ್ರಿಟಿಗಳ ವಿಚಾರಣೆ ಮಾಡಲಾಗುತ್ತಿದೆ.
ಈಗಾಗಲೇ ಸುಮಾರು 30 ಜನರನ್ನು ವಿಚಾರಣೆ ಮಾಡಲಾಗಿದೆ. ಸುಶಾಂತ್ ಕುಟುಂಬಸ್ಥರು, ಗೆಳತಿ ರಿಯಾ ಚಕ್ರವರ್ತಿ, ಕಾಸ್ಟಿಂಗ್ ನಿರ್ದೇಶಕ ಮುಖೇಶ್, ಯಶ್ ರಾಜ್ ಬ್ಯಾನರ್ ನ ಕಾಸ್ಟಿಂಗ್ ನಿರ್ದೇಶಕ ಸೇರಿದಂತೆ ಹಲವರ ಹೇಳಿಕೆ ಪಡೆಯಲಾಗಿದೆ. ಇದೀಗ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಬನ್ಸಾಲಿಗೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದರು. ಹೀಗಾಗಿ, ನಿನ್ನೆ ಮಧ್ಯಾಹ್ನ 12.30ರ ಸಮಯಕ್ಕೆ ಬನ್ಸಾಲಿ ಪೊಲೀಸ್ ಠಾಣೆಗೆ ತಮ್ಮ ಕಾನೂನು ತಂಡದೊಂದಿಗೆ ಆಗಮಿಸಿ ವಿಚಾರಣೆಯಲ್ಲಿ ಭಾಗಿಯಾಗಿದ್ದರು.