ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನಟಿ ರಾಗಿಣಿ ದ್ವಿವೇದಿ ತಿಳಿಸಿದ್ದಾರೆ.
ನಟಿ ರಾಗಿಣಿ ಆಪ್ತ ರವಿಶಂಕರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ರಾಗಿಣಿಗೂ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ನಟಿ ರಾಗಿಣಿ ಸುಪ್ರೀಂ ಕೋರ್ಟ್ ನ ವಕೀಲರೊಬ್ಬರ ಬಳಿ ಚರ್ಚಿಸಿದ್ದು, ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಅಲ್ಲದೇ ರವಿಶಂಕರಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಇನ್ನು ತಮಗೆ ಸಿಸಿಬಿಯಿಂದ ಯಾವುದೇ ರೀತಿಯ ಅಧಿಕೃತ ನೋಟೀಸ್ ಬಂದಿಲ್ಲ. ಕೇವಲ ವಾಟ್ಸಾಪ್ ನೋಟೀಸ್ ನೀಡಿದ್ದಾರೆ. ವಾಟ್ಸಾಪ್ ನೋಟೀಸ್ ನ್ನು ನಾನು ಹೇಗೆ ಗಂಭೀರವಾಗಿ ಪರಿಗಣಿಸಲು ಸಾಧ್ಯ ಎಂದು ವಕೀಲರೊಬ್ಬರ ಜತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ನಟಿ ರಾಗಿಣಿ ಸೋಮವಾರ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದೂ ಹೇಳಲಾಗುತ್ತಿದೆ.