ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದು, ಇದು ಬಾಲಿವುಡ್ ಚಿತ್ರರಂಗವನ್ನು ಮಾತ್ರವಲ್ಲದೇ ಅಭಿಮಾನಿಗಳಿಗೂ ಆಘಾತ ನೀಡಿದೆ.
ಸುಶಾಂತ್ ಸಿಂಗ್ ತಮ್ಮ ಮಾಜಿ ಮ್ಯಾನೇಜರ್ ದಿಶಾ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಾವಿಗೆ ಶರಣಾಗಿದ್ದರಿಂದ ಹಲವು ಊಹಾಪೋಹಗಳು ಹರಿದಾಡಿದ್ದವು. ಆದರೆ ಸುಶಾಂತ್ ಅವರ ಸಾವಿಗೆ ಖಿನ್ನತೆಯೇ ಕಾರಣವೆಂದು ಹೇಳಲಾಗುತ್ತಿದೆ.
ಕಳೆದ ಆರು ತಿಂಗಳಿನಿಂದ ಖಿನ್ನತೆಗೊಳಗಾಗಿದ್ದ ಸುಶಾಂತ್ ಸಿಂಗ್ ಲಾಕ್ ಡೌನ್ ಬಳಿಕ ಚಿತ್ರರಂಗದ ಚಟುವಟಿಕೆ ಸ್ಥಗಿತಗೊಂಡ ಕಾರಣ ಮತ್ತಷ್ಟು ಕುಸಿದು ಹೋಗಿದ್ದರೆನ್ನಲಾಗಿದೆ.
ತಮ್ಮ ಮಾಜಿ ಮ್ಯಾನೇಜರ್ ದಿಶಾ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದ ಸುಶಾಂತ್, ಆತ್ಮಹತ್ಯೆಗೂ ಮುನ್ನಾದಿನ ಅಂದರೆ ಶನಿವಾರ ತಮ್ಮ ಸ್ನೇಹಿತರೊಂದಿಗೆ ಕಾಲ ಕಳೆದಿದ್ದರೆನ್ನಲಾಗಿದೆ. ಇದಾದ ಬಳಿಕ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದರ ಹಿಂದಿನ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.