ಹೈದರಾಬಾದ್: ಈಗಾಗಲೇ ಯುವರತ್ನ ಚಿತ್ರದ ಟೀಸರ್ ಹಾಗೂ ಎರಡು ಹಾಡುಗಳಿಂದ ಟಾಲಿವುಡ್ ಸಿನಿ ರಸಿಕರ ಮನಗೆದ್ದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತೆಲುಗು ಚಿತ್ರರಂಗದಿಂದ ಹೊಸ ಆಫರ್ ಬಂದಿದೆ. ಟಾಲಿವುಡ್ ನ ಚಿತ್ರವೊಂದರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಹೌದು. ಟಾಲಿವುಡ್ ನಟ ಬಾಲಯ್ಯ ಅಭಿನಯದ 106ನೇ ಚಿತ್ರದಲ್ಲಿ ಪವರ್ ಸ್ಟಾರ್ ಅಭಿನಯಿಸಲಿದ್ದಾರಂತೆ. ಟಾಲಿವುಡ್ ಸ್ಟಾರ್ ನಿರ್ದೇಶಕ ಬೋಯೊಪಾಟಿ ಸೀನು ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಈ ಚಿತ್ರದಲ್ಲಿ ಪುನೀತ್, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಂದಹಾಗೇ ಈ ಹಿಂದೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಕೂಡ ಬಾಲಯ್ಯ ಅವರ ’ಗೌತಮಿ ಪುತ್ರ ಶಾತಕರ್ಣಿ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರದಿ. ಅಪ್ಪು, ಬಾಲಯ್ಯ ಅವರ ಜೊತೆ ತೆರೆ ಹಂಚಿಕೊಳ್ಳುವುವ ಮೂಲಕ ಟಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.