ನಟಿ ಶ್ರೀರೆಡ್ಡಿ ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಲೇ ಇದ್ದಾರೆ. ಸ್ಟಾರ್ ನಟರ ವಿರುದ್ಧ ಸಿಡಿದೆದ್ದಿದ್ದ ಈ ನಟಿ ಅನೇಕ ಬಾರಿ ವಿವಾದಕ್ಕೊಳಗಾದರು. ಅಷ್ಟೆ ಅಲ್ಲ ಟಾಲಿವುಡ್ ನಲ್ಲಿ ಒಂದಿಷ್ಟು ಜನರ ಮೇಲೆ ನೇರವಾಗಿ ಆರೋಪ ಮಾಡುವ ಮೂಲಕ ವಿರೋಧ ಕಟ್ಟಿಕೊಂಡರು.
ಇದೀಗ ಡ್ರಗ್ಸ್ ವಿಚಾರವಾಗಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ ಈ ನಟಿ. ಇತ್ತ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನಲ್ಲಿ ಡ್ರಗ್ಸ್ ದಂಧೆ ವಿಚಾರ ದೊಡ್ಡ ಮಟ್ಟದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಬೆನ್ನಲ್ಲೇ ನಟಿಯ ಹೇಳಿಕೆ ಮತ್ತೊಂದು ತಿರುವಿಗೆ ಕಾರಣವಾಗುತ್ತಾ ಎಂಬ ಅನುಮಾನ ಕಾಡತೊಡಗಿದೆ.
ಹೌದು, ಡ್ರಗ್ಸ್ ವಿಚಾರವಾಗಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ ಈ ನಟಿ. ಈ ವಿಡಿಯೋದಲ್ಲಿ ಹೇಳಿರುವ ಪ್ರಕಾರ, ನನಗೆ ಟಾಲಿವುಡ್‌ನಲ್ಲಿ ಡ್ರಗ್ಸ್ ಸೇವಿಸುವವರ ಬಗ್ಗೆ ಗೊತ್ತಿದೆ. ಪೊಲೀಸರು ಭದ್ರತೆ ಕೊಡುವುದಾದರೆ ನಾನು ಡ್ರಗ್ಸ್ ಜಾಲದಲ್ಲಿರುವವರ ಹೆಸರು ಹೇಳ್ತೇನೆ. ದೊಡ್ಡ ದೊಡ್ಡ ನಟರ ಮನೆಯಲ್ಲಿ ಆಗುವ ಪಾರ್ಟಿಗಳಲ್ಲಿಯೂ ಡ್ರಗ್ಸ್ ಸೇವನೆ ಆಗುತ್ತೆ ಎಂದಿದ್ದಾರೆ. ಇವರ ಈ ಹೇಳಿಕೆ ಟಾಲಿವುಡ್ ಇಂಡಸ್ಟ್ರಿಯಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡದೇ ಇರದು.