ಲಾಕ್ಡೌನ್ ಸಂದರ್ಭದಲ್ಲಿ ತನ್ನ ಅಪಾರ್ಟ್ಮೆಂಟ್ ಅನ್ನು ಜೂಜಾಟದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ ಬಹುಭಾಷಾ ನಟನನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಜೂಜಾಟಕ್ಕೆ ಬಳಸಿದ್ದ ಲಕ್ಷಾಂತರ ರೂಪಾಯಿ ವಶಪಡಿಸಿಕೊಂಡಿದ್ದಾರೆ.
ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟ ಶ್ಯಾಮ್ ಬಂಧಿತನಾಗಿದ್ದು, ಈತನೊಂದಿಗೆ ಇದ್ದ ಇತರೆ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ಯಾಮ್, ಸ್ಯಾಂಡಲ್ವುಡ್ ನ ‘ತನನಂ’, ರಾಕಿಂಗ್ ಸ್ಟಾರ್ ಯಶ್ ನಾಯಕ ನಟರಾಗಿರುವ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಶ್ಯಾಮ್ ಮತ್ತಾತನ ತಂಡ ಚೆನ್ನೈನ ನುಂಗಂಬಾಕಂನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಜೂಜಾಟ ಆಡುತ್ತಿದ್ದರೆನ್ನಲಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಇದು ರಾತ್ರಿ 11 ರಿಂದ ಬೆಳಗಿನ ಜಾವ 4 ಗಂಟೆಯವರೆಗೂ ನಡೆಯುತ್ತಿತ್ತೆಂದು ಹೇಳಲಾಗಿದೆ.
ಈ ಜೂಜಾಟದಲ್ಲಿ ದೊಡ್ಡ ಮೊತ್ತವನ್ನು ಕಳೆದುಕೊಂಡಿದ್ದ ಮತ್ತೊಬ್ಬ ನಟ ಪೊಲೀಸರಿಗೆ ನೀಡಿದ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿ ಶ್ಯಾಮ್ ಮತ್ತಾತನ ತಂಡವನ್ನು ಬಂಧಿಸಿದ್ದಾರೆ. ಕನ್ನಡ ಚಿತ್ರರಂಗದ ಕೆಲ ನಟ-ನಟಿಯರು ಸಹ ಈ ಜೂಜಾಟದಲ್ಲಿ ಭಾಗಿಯಾಗಿದ್ದರೆಂದು ಹೇಳಲಾಗಿದ್ದು, ಚೆನ್ನೈ ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಲಿದೆ. ಶ್ಯಾಮ್ ಮತ್ತಾತನ ಸಹಚರರನ್ನು ಈಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.