
ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವು ಎಂದಿಗೂ ಮೇಘನಾ ಹಾಗೂ ಸರ್ಜಾ ಕುಟುಂಬದಿಂದ ದೂರ ಆಗಲ್ಲ. ಚಿಕ್ಕ ವಯಸ್ಸಿನಲ್ಲೇ ಕ್ರೂರ ವಿಧಿ ಚಿರುವನ್ನ ಕರೆದುಕೊಂಡು ಬಿಟ್ಟಿದೆ. ಇಂತಹ ಕಠಿಣ ದಿನಗಳಲ್ಲೂ ಅತ್ಯಂತ ಭಾವುಕ ಮತ್ತು ಹೃದಯಸ್ಪರ್ಶಿ ಬರಹವನ್ನು ಇತ್ತೀಚೆಗೆ ಮೇಘನಾ ರಾಜ್ ಹಂಚಿಕೊಂಡಿದ್ದರು. ಇದರ ಜೊತೆಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.
ತಮ್ಮ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಅವರು ಮೇಘನಾ ರಾಜ್ ಎಂದಷ್ಟೇ ಹೆಸರನ್ನು ಇದುವರೆಗೆ ಇಟ್ಟುಕೊಂಡಿದ್ದರು. ಚಿರು ಅಗಲಿಕೆಯ ನಂತರ ಸರ್ಜಾ ಕುಟುಂಬದ ಸರ್ ನೇಮ್ ಅನ್ನು ಸೇರಿಸಿಕೊಂಡಿದ್ದಾರೆ. ಮೇಘನಾ ರಾಜ್ ಸರ್ಜಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಅವರು ಪ್ರೊಫೈಲ್ ಚಿತ್ರವನ್ನೂ ಬದಲಿಸಿಕೊಂಡಿದ್ದರು. ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಯಿಂದ ನಗುತ್ತಾ ಅಪ್ಪಿಕೊಂಡಿರುವ ಕಪ್ಪು-ಬಿಳುಪು ಚಿತ್ರ ಹಾಕಿಕೊಂಡಿದ್ದಾರೆ.
ಹೆಸರು ಬದಲಾಯಿಸುವ ಮೊದಲು ಮೇಘನಾ ಹೃದಯ ಸ್ಪರ್ಶಿ ಬರಹವೊಂದು ಬರೆದಿದ್ದರು. ಚಿರು ಇಲ್ಲದ ನೋವನ್ನು ಪದಗಳ ಮೂಲಕ ಹೊರ ಹಾಕಿದ್ದರು ಈ ನಟಿ. ಮೇಘನಾ ಗರ್ಭಿಣಿಯಾಗಿದ್ದು ಮಗುವಿನ ಮೂಲಕ ಮತ್ತೆ ಚಿರುವನ್ನು ನೋಡಲು ಕಾತುರರಾಗಿದ್ದಾರೆ.
