ಒಂದು ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟ ಕೆಲವೇ ಗಂಟೆಗಳಲ್ಲಿ ಅಥವಾ ಚಿತ್ರ ರಿಲೀಸ್‌ಗೂ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಬಿಡುತ್ತದೆ. ಇದರಿಂದ ನಿರ್ಮಾಪಕರಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಏನೇ ಮಾಡಿದರೂ ಇದನ್ನು ತಡೆಯೋದಿಕ್ಕೆ ಆಗುತ್ತಿಲ್ಲ. ಸಿನಿಮಾವನ್ನು ಥಿಯೇಟರ್‌ನಲ್ಲಿ ಹೋಗಿ ನೋಡೋ ಬದಲು ಅನೇಕರು ತಮ್ಮ ಮೊಬೈಲ್‌ನಲ್ಲೇ ನೋಡುತ್ತಾರೆ. ಇದರಿಂದ ನಿರ್ಮಾಪಕರ ಆದಾಯಕ್ಕೆ ಹೊಡೆತ ಬೀಳೋದ್ರ ಜೊತೆಗೆ ಇಡೀ ಸಿನಿಮಾ ತಂಡದ ಪ್ರಯತ್ನಗಳು ವ್ಯರ್ಥವಾಗುತ್ತಿವೆ.
ಈ ಚಿತ್ರ ಪೈರಸಿಯನ್ನು ತಡೆಯೋದಿಕ್ಕೆ ಇದೀಗ ಹೊಸ ತಂತ್ರಜ್ಞಾನವೊಂದನ್ನು ಲಾಂಚ್ ಮಾಡಲಾಗುತ್ತಿದೆ. ಕಾಂಟ್ರಪೈನ್ ಸಂಸ್ಥೆ ಹೊಸದೊಂದು ಸಾಫ್ಟ್‌ವೇರ್ ಕಂಡು ಹಿಡಿದಿದೆ. ಈ ಹೊಸ ಸಾಫ್ಟ್‌ವೇರ್ ಇರುವ ಉಪಕರಣದಿಂದ ಪೈರಸಿ ನಿಲ್ಲಿಸಬಹುದು. ಚಿತ್ರಮಂದಿರಗಳಲ್ಲಿ ಹಾಕಲಾಗಿರುವ ಸ್ಪೀಕರ್‌ಗಳ ಬಳಿ ಈ ಉಪಕರಣವನ್ನು ಅಳವಡಿಸಲಾಗುತ್ತದೆ. ಅಕಸ್ಮಾತ್ ಯಾರಾದರೂ ಕದ್ದು ಮೊಬೈಲ್ ಅಥವಾ ಕ್ಯಾಮರಾ ಮೂಲಕ ಚಿತ್ರೀಕರಣ ಮಾಡುತ್ತಾರೆ ಎಂದರೆ ಅವರಿಗೆ ಕೇವಲ ದೃಶ್ಯ ಮಾತ್ರ ಸಿಗುತ್ತದೆ, ಆಡಿಯೋ ರೆಕಾರ್ಡ್ ಆಗೋದಿಲ್ಲ. ಉಪಕರಣದ ಜೊತೆಯಲ್ಲಿ ಕ್ಯಾಮರಾವೊಂದನ್ನು ಅಳವಡಿಸಲಾಗುತ್ತದೆ. ಈ ವೇಳೆ ಕದ್ದು ರೆಕಾರ್ಡ್ ಮಾಡುವ ಮಾಹಿತಿ ಕೂಡ ತಿಳಿಯುತ್ತದೆ.
ನವೆಂಬರ್ 26 ರಂದು ಈ ಸಾಫ್ಟ್‌ವೇರ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಬಿಜೆಪಿ ಉಪಾದ್ಯಕ್ಷ ವಿಜಯೇಂದ್ರ ಈ ತಂತ್ರಜ್ಞಾನ ಉದ್ಘಾಟನೆ ಮಾಡಲಿದ್ದಾರೆ. ಈ ಹೊಸ ತಂತ್ರಜ್ಞಾನದ ಉಪಕರಣವನ್ನು ಬೆಂಗಳೂರಿನ ಚಿತ್ರಮಂದಿರಗಳಿಗೆ ಅಳವಡಿಸಲಾಗುತ್ತಿದೆ. ಇದು ಯಶಸ್ವಿಯಾದರೆ ಇಡೀ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿಗಳಿಗೂ ಅಳವಡಿಸಲಾಗುತ್ತದೆ.