ಚೆನ್ನೈ: ತಮಿಳು ನಟ ವಡಿವೇಲ್ ಬಾಲಾಜಿ ತಮ್ಮ 45 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು, ಖ್ಯಾತನಾಮರು ಶೋಕ ವ್ಯಕ್ತಪಡಿಸಿದ್ದಾರೆ.
ಕಿರುತೆರೆ ಮನರಂಜನಾ ಕಾರ್ಯಕ್ರಮಗಳಲ್ಲಿ, ತಮ್ಮ ಪಾತ್ರಗಳಿಂದ ಖ್ಯಾತಿ ಗಳಿಸಿದ್ದ ಬಾಲಾಜಿ ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಎರಡು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಪತ್ನಿ, ಒಬ್ಬ ಮಗ ಮತ್ತು ಮಗಳು ಇದ್ದಾರೆ.
ಹೃದಯಾಘಾತದ ನಂತರ ಬಾಲಾಜಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಹದಗೆಟ್ಟು ಪಾರ್ಶ್ವವಾಯುವಿಗೆ ಕಾರಣವಾದ ನಂತರ ಅವರನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಪಾವತಿಸಲು ಸಾಧ್ಯವಾಗದೆ, ಅವರ ಕುಟುಂಬವು ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು. ಲಾಕ್ ಡೌನ್ ಸಮಯದಲ್ಲಿ ಅವರ ಕುಟುಂಬವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದೆ ಎಂದು ಹೇಳಲಾಗಿದೆ.
ಕೆಲವು ತಮಿಳು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ತಮಿಳುನಾಡಿನಲ್ಲಿ ಮನೆ ಮಾತಾದ ಹಿರಿಯ ಹಾಸ್ಯನಟ ವಡಿವೇಲು ಅವರ ಪರಿಪೂರ್ಣ ಅನುಕರಣೆಗಾಗಿ ಬಾಲಾಜಿ ಪ್ರಸಿದ್ಧರಾಗಿದ್ದರು. ಅದಕ್ಕಾಗಿಯೇ ಅವರು ವಡಿವೇಲು ಬಾಲಾಜಿ ಎಂದು ಹೆಸರು ಬದಲಿಸಿಕೊಂಡಿದ್ದರು. ಅವರ ನಿಧನದ ಬಗ್ಗೆ ತಿಳಿದ ತಮಿಳು ಚಿತ್ರರಂಗದ ಹಲವಾರು ನಟರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.