ಚೆನ್ನೈ: ಕೊರೊನಾ ಸೋಂಕಿನಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಖ್ಯಾತ ಗಾಯಕ, ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಸತತ 56 ವರ್ಷಗಳ ಕಾಲ ನಿರಂತರ ತಮ್ಮ ಗಾನಸುಧೆಯನ್ನು ಹರಿಸುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ್ದ ಗಾನ ಸಾಮ್ರಾಟ ಇಂದು ತಮ್ಮ ಗಾನ ನಿಲ್ಲಿಸಿದ್ದಾರೆ.
ಕಳೆದ 50 ದಿನಗಳಿಂದ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ 1 ಗಂಟೆ ನಾಲ್ಕು ನಿಮಿಷಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಸಾವಿತ್ರಿ, ಪುತ್ರ ಚರಣ್, ಪುತ್ರಿ ಪಲ್ಲವಿ ಅವರನ್ನು ಅಗಲಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ.5ರಂದು ವೈದ್ಯರ ಸಲಹೆ ಮೇರೆಗೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಎಂಜಿಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆ.13ರ ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೆ ನುರಿತ ವೈದ್ಯರಿಂದ ವೆಂಟಿಲೇಟರ್ ನಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು.
ಇತ್ತೀಚೆಗಷ್ಟೇ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರು ವೈದ್ಯರ ಸಹಾಯದಿಂದ ಕುಳಿತುಕೊಳ್ಳುತ್ತಿದ್ದಾರೆ ಎಂದು ಅವರ ಪುತ್ರ ಚರಣ್ ಮಾಹಿತಿ ನೀಡಿದ್ದರು. ಆದರೆ ನಿನ್ನೆ ಎಂಜಿಎಂ ಅಸ್ಪತ್ರೆ ಬಿಡುಗಡೆ ಮಾಡಿದ್ದ ಹೆಲ್ತ್ ಬುಲೆಟಿನ್ ನಲ್ಲಿ ಕಳೆದ ಎರಡು ದಿನಗಳಿಂದ ಎಸ್.ಪಿ.ಬಿ. ಆರೋಗ್ಯ ಕ್ಷೀಣಿಸುತ್ತಿದೆ ಎಂದು ತಿಳಿಸಿತ್ತು.
ಜೀವನ-ಸಾಧನೆ:
ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ ಅವರು 1946, ಜೂನ್ 4ರಂದು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿ ಜನಿಸಿದ್ದರು. ಆರಂಭದಲ್ಲಿ ಅಷ್ಟಾಗಿ ಸಂಗೀತ ಕಲಿತಿರಲಿಲ್ಲವಾದರೂ ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ. ಸಾಂಬಮೂರ್ತಿ ಅವರ ಪ್ರೇರಣೆಯಿಂದಾಗಿ ಹಾಡುಗಳನ್ನು ಹಾಡಲು ಆರಂಭಿಸಿದರು. ನಂತರದ ದಿನಗಳಲ್ಲಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.
1966ರಲ್ಲಿ ಬಾಲಸುಬ್ರಹ್ಮಣ್ಯಂ ಘಂಟಸಾಲ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯೊಂದರಲ್ಲಿ ವಿಜೇತರಾಗಿದ್ದರು. ಅಲ್ಲಿಂದ ಆರಂಭವಾಯಿತು ಗಾನ ಗಂಧರ್ವನ ಸಂಗೀತ ಪಯಣ. 1955ರಲ್ಲಿ ಎಸ್.ಪಿ.ಬಿ. ಅವರಿಗೆ ಕೋದಂಡಪಾಣಿಯವರು ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಎಂಬ ತೆಲುಗು ಚಿತ್ರದಲ್ಲಿ ಹಾಡಲು ಅವಕಾಶ ನೀಡಿದ್ದರು. ಅಂದಿನಿಂದ ಬಾಲಸುಬ್ರಹ್ಮಣ್ಯಂ ಹಿಂತಿರುಗಿ ನೋಡಲೇ ಇಲ್ಲ. ಭಾರತೀಯ ಚಿತ್ರರಂಗದ ಅದ್ಭುತ ಗಾಯಕನಾಗಿದ್ದ ಬಾಲಸುಬ್ರಹ್ಮಣ್ಯಂ ಭಾಷಾ ಪರಿಧಿಗಳನ್ನೂ ಮೀರಿ ಸುಮಾರು 16 ಭಾಷೆಗಳಲ್ಲಿ, 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.
ಒಂದೇ ದಿನ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕನ್ನಡದಲ್ಲಿ 17 ಹಾಡುಗಳ ಧ್ವನಿ ಮುದ್ರಿಸಿದ್ದರು. ಹಿಂದಿಯಲ್ಲಿ 16 ಹಾಡುಗಳನ್ನು ಹಾಗೂ ತಮಿಳು ತೆಲುಗಿನಲ್ಲಿ ಒಂದೇ ದಿನ 19 ಹಾಡುಗಳನ್ನು ಧ್ವನಿ ಮುದ್ರಿಸಿದ್ದರು. ಇದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಇದ್ದ ಬೇಡಿಕೆಗೆ ಅವರ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ.
ಗಾಯಕನಾಗಿ ಮಾತ್ರವಲ್ಲ ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲಸುಬ್ರಹ್ಮಣ್ಯಂ ಹೆಸರು ಮಾಡಿದ್ದರು. ಚಿತ್ರರಂಗದಲ್ಲಿನ ಎಸ್.ಪಿ.ಬಿ. ಸಾಧನೆಗೆ ಅವರು ನಾಲ್ಕು ಭಾಷೆಗಳಲ್ಲಿ ಪಡೆದಿದ್ದ 6 ರಾಷ್ಟ್ರ ಪ್ರಶಸ್ತಿಗಳೇ ಸಾಕ್ಷಿ. 25 ಬಾರಿ ಆಂಧ್ರಪ್ರದೇಶ ಸರ್ಕಾರ ಎಸ್.ಪಿ.ಬಿ. ಅವರಿಗೆ ನಂದಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಪದ್ಮಶ್ರೀ, ಪದ್ಮಭೂಷಣ, ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಅವರನ್ನು ಅರಸಿ ಬಂದಿತ್ತು.