ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ವಿಚಾರಣೆ ಮುಂದುವರೆದಿದೆ. ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಸಿಬಿ ವಿರುದ್ಧ ಈಗ ಸುಶಾಂತ್ ಮನೆಯಲ್ಲಿ ಕೆಲಸ ಮಾಡ್ತಿದ್ದ ಕೆಲಸಗಾರ ದೂರು ನೀಡಿದ್ದಾನೆ. ಮನೆ ಕೆಲಸ ಮಾಡ್ತಿದ್ದ ವ್ಯಕ್ತಿ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಸರ್ಕಾರದಿಂದ 10 ಲಕ್ಷ ರೂಪಾಯಿಗಳ ಪರಿಹಾರವನ್ನು ಕೋರಿದ್ದಾನೆ.
ಎನ್ಸಿಬಿ ನನ್ನನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿತ್ತೆಂದು ಕೆಲಸಗಾರ ಆರೋಪ ಮಾಡಿದ್ದಾರೆ. ಇದು ಸಂವಿಧಾನದ ವಿಧಿ 21 ಮತ್ತು ವಿಧಿ 22 ರ ಉಲ್ಲಂಘನೆಯಾಗಿದೆ. ಈ ಅರ್ಜಿಯನ್ನು ಬಾಂಬೆ ಹೈಕೋರ್ಟ್ನ ನ್ಯಾಯಮೂರ್ತಿ ಎಸ್ಎಸ್ ಶಿಂಧೆ ಮತ್ತು ನ್ಯಾಯಮೂರ್ತಿ ಕಾರ್ನಿಕ್ ಅವರ ನ್ಯಾಯಪೀಠವು ನವೆಂಬರ್ 6 ರಂದು ವಿಚಾರಣೆ ನಡೆಸಲಿದೆ.
ಡ್ರಗ್ಸ್ ಪ್ರಕರಣದಲ್ಲಿ ಕೆಲಸಗಾರನನ್ನು ಎನ್ ಸಿ ಬಿ ಬಂಧಿಸಿತ್ತು. ಎರಡು ವಾರಗಳ ಹಿಂದೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಸೆಪ್ಟೆಂಬರ್ 5 ರಂದು ಕೆಲಸಗಾರನನ್ನು ಎನ್ ಸಿ ಬಿ ಬಂಧಿಸಿರುವುದಾಗಿ ಹೇಳಿದೆ. ಆದ್ರೆ ಕೆಲಸಗಾರ ಎನ್ ಸಿ ಬಿ ತನ್ನನ್ನು ಸೆಪ್ಟೆಂಬರ್ 4 ರಂದು ಸಂಜೆ 4 ಗಂಟೆಗೆ ಬಂಧಿಸಿರುವುದಾಗಿ ಹೇಳಿದ್ದಾನೆ. ಸೆಪ್ಟೆಂಬರ್ 6 ರಂದು ಮಧ್ಯಾಹ್ನ 1 : 30 ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಂಧಿಸಿದ 24 ಗಂಟೆಯೊಳಗೆ ಕೋರ್ಟ್ ಮುಂದೆ ಹಾಜರುಪಡಿಸಬೇಕು. ಆದ್ರೆ 36 ಗಂಟೆಯಾದ್ರೂ ಕೋರ್ಟ್ ಮುಂದೆ ಹಾಜರುಪಡಿಸಿರಲಿಲ್ಲ. ಇದು ಸಂವಿಧಾನದ ಉಲ್ಲಂಘನೆ ಎಂದು ಅರ್ಜಿಯಲ್ಲಿ ಕೆಲಸಗಾರ ಆರೋಪ ಮಾಡಿದ್ದಾನೆ.