ಅತಿ ಹೆಚ್ಚು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವುದರಲ್ಲಿ ಕತ್ರಿನಾ ಕೈಫ್ ಹೆಸರು ಮೊದಲಿಗಿದೆ. 37ರ ಹರೆಯದಲ್ಲೂ ಕತ್ರಿನಾ 25ರ ಯುವತಿಯಂತೆ ಕಾಣಿಸುತ್ತಾರೆ. ನನ್ನ ಕೂದಲೇ ನನ್ನ ನಿಜವಾದ ಆಸ್ತಿ ಎನ್ನುವ ಕತ್ರಿನಾ ಅವರ ಕೂದಲಿನ ಸೀಕ್ರೆಟ್ ಏನೆಂಬುದು ನಿಮಗೆ ಗೊತ್ತೇ?
ಕತ್ರಿನಾ ನಿತ್ಯ ತಲೆ ಸ್ನಾನ ಮಾಡುತ್ತಾರೆ. ಇದರಿಂದ ಕೂದಲು ಸ್ವಚ್ಛವಾಗುತ್ತದೆ. ನಿತ್ಯ ತಲೆ ಸ್ನಾನ ಮಾಡುವುದರಿಂದ ಕೂದಲು ಹೆಚ್ಚು ಉದುರುತ್ತದೆ ಎಂಬುದನ್ನು ನಾನು ನಂಬುವುದಿಲ್ಲ ಎನ್ನುತ್ತಾರೆ ಕತ್ರಿನಾ.
ನಾನೆಂದು ನನ್ನ ಕೂದಲಿನ ಮೇಲೆ ಪ್ರಯೋಗ ನಡೆಸಲು ಇಷ್ಟಪಡುವುದಿಲ್ಲ. ಅದು ಹೇಗೆ ಇರುತ್ತದೋ ಹಾಗೇ ಬಿಡುತ್ತೇನೆ. ಉದ್ದಕ್ಕೆ ಬೆಳೆಸುವ, ಸಣ್ಣದಾಗಿ ಕತ್ತರಿಸುವ ಪ್ರಯೋಗಗಳನ್ನು ನಾನು ನಡೆಸುವುದೇ ಇಲ್ಲ ಎಂಬುದು ಕತ್ರಿನಾ ಅವರ ಮಾತು.
ನಿತ್ಯ ತಲೆ ಕೂದಲಿಗೆ ಶ್ಯಾಂಪೂ ಹಾಕಿಯೇ ಸ್ನಾನ ಮಾಡುವ ಕತ್ರಿನಾ ಕೂದಲನ್ನು ನೈಸರ್ಗಿಕವಾಗಿಯೇ ಒಣಗಿಸುತ್ತಾರಂತೆ. ನಿತ್ಯ ವ್ಯಾಯಾಮ ಮಾಡುವುದರ ಮೂಲಕ ಆಕರ್ಷಕ ದೇಹ ಹಾಗೂ ರೂಪ ಪಡೆದುಕೊಂಡಿರುವ ಕತ್ರಿನಾ ತಲೆಕೂದಲಿನ ಆಕರ್ಷಣೆಯೇ ನಿಮ್ಮನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತದೆ ಎನ್ನುತ್ತಾರೆ.