ಮುಂಬೈ: ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಸಂಬಂಧ ಎನ್.ಸಿ.ಬಿ. ವಿಚಾರಣೆಗೆ ಹಾಜರಾಗಿದ್ದ ನಟಿ ದೀಪಿಕಾ ಅವರ ವಿಚಾರಣೆ ಮುಕ್ತಾಯಗೊಂಡಿದೆ. ವಿಚಾರಣೆ ವೇಳೆ ಅಧಿಕಾರಿಗಳು ನಟಿ ದೀಪಿಕಾ ಅವರಿಂದ ಹಲವಾರು ಸ್ಫೋಟಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಡ್ರಗ್ಸ್ ಖರೀದಿಗಾಗಿ ನಟಿ ದೀಪಿಕಾ, ಮ್ಯಾನೇಜರ್ ಕರಿಷ್ಮಾ ಜೊತೆ ನಡೆಸಿದ್ದರು ಎನ್ನಲಾದ ವಾಟ್ಸಪ್ ಚಾಟ್ ಭಾರಿ ವೈರಲ್ ಆಗಿತ್ತು. ಅಲ್ಲದೇ ಈ ಮಾಹಿತಿ ಬೆನ್ನು ಹತ್ತಿದ್ದ ಎನ್ ಸಿಬಿ ಅಧಿಕಾರಿಗಳಿಗೆ ಈ ವಾಟ್ಸಪ್ ಗ್ರೂಪ್ ಗೆ ದೀಪಿಕಾ ಅವರೇ ಅಡ್ಮಿನ್ ಆಗಿದ್ದರು ಹಾಗೂ ಕರಿಷ್ಮಾ, ಜಯಾ ಸಹಾ ಸೇರಿದಂತೆ ಇನ್ನು ಕೆಲವರು ಈ ವಾಟ್ಸಪ್ ಗ್ರೂಪ್ ನಲ್ಲಿರುವುದು ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಟಿ ದೀಪಿಕಾ ಅವರಿಗೆ ಎನ್ ಸಿಬಿ ಅಧಿಕಾರಿಗಳು ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು.
ಆದರೆ ಇಂದು ವಿಚಾರಣೆಗೆ ಹಾಜರಾಗುವುದಾಗಿ ದೀಪಿಕಾ ತಿಳಿಸಿದ್ದರು. ಅದರಂತೆ ಎನ್ ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದ ದೀಪಿಕಾ ಪಡುಕೋಣೆ ಅವರನ್ನು ಎನ್ ಸಿಬಿ ಗೆಸ್ಟ್ ಹೌಸ್ ನಲ್ಲಿ ಸತತ ಐದುವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ವಾಟ್ಸಪ್ ಸಂಭಾಷಣೆ ಕುರಿತು ಹಾಗೂ ಡ್ರಗ್ಸ್ ಜಾಲದ ಬಗ್ಗೆ ಇರುವ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ದೀಪಿಕಾ ಮೊಬೈಲ್ ನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ ವಾಪಸ್ ನೀಡಿದ್ದಾರೆ ಎನ್ನಲಾಗಿದೆ. ಸತತ ಐದುವರೆ ಗಂಟೆ ವಿಚಾರಣೆ ಎದುರಿಸಿದ ಬಳಿಕ ನಟಿ ಹೊರಬಂದಿದ್ದಾರೆ. ಒಟ್ಟಾರೆ ಬಾಲಿವುಡ್ ಡ್ರಗ್ಸ್ ಪ್ರಕರಣ ಸಂಬಂಧ ನಟಿ ದೀಪಿಕಾ ಪಡುಕೋಣೆ ಅವರ ಎನ್ ಸಿಬಿ ವಿಚಾರಣೆ ಸಾಕಷ್ಟು ಕುತೂಹಲ ಮೂಡಿಸಿದೆ.