ಗಾಯಕ ಬಪ್ಪಿ ಲಹರಿಗೆ ಚಿನ್ನದ ಮೇಲೆ ಎಷ್ಟೊಂದು ವ್ಯಾಮೋಹ ಇತ್ತು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಇವರ ಚಿನ್ನದ ಆಭರಣಗಳ ಸಂಗ್ರಹದಿಂದಾಗಿ ಭಾರತದ ಚಿನ್ನದ ವ್ಯಕ್ತಿ ಎಂದೇ ಪರಿಚಿತರಾಗಿದ್ದಾರೆ.
ಅನೇಕ ಸಂದರ್ಶನಗಳಲ್ಲಿ ಬಪ್ಪಿ ಲಹರಿ ತಮಗೆ ಚಿನ್ನದ ಮೇಲಿನ ಎಷ್ಟೊಂದು ಪ್ರೀತಿ ಇದೆ ಎಂಬುದನ್ನು ಹೇಳಿದ್ದಾರೆ. ಆದರೆ ಇದೀಗ ಬಪ್ಪಿ ಲಹರಿ ನಮ್ಮೊಂದಿಗಿಲ್ಲ. ಹಾಗಾದರೆ ಅವರ ಪ್ರೀತಿಯ ಚಿನ್ನದ ಆಭರಣಗಳು ಏನಾದವು..? ಈ ಪ್ರಶ್ನೆಗೆ ಬಪ್ಪಿ ಲಹರಿ ಪುತ್ರ ಬಪ್ಪಾ ಉತ್ತರ ನೀಡಿದ್ದಾರೆ.
ಬಪ್ಪಿ ಲಹರಿ 2022ರ ಫೆಬ್ರವರಿ 15ರಂದು ನಿಧನರಾಗಿದ್ದಾರೆ. ಇವರ ಪುತ್ರ ಬಪ್ಪ ಲಹಿರಿ ಈ ವಿಚಾರವಾಗಿ ಮಾತನಾಡಿದ್ದು, ನಮ್ಮ ತಂದೆಗೆ ಅದು ಕೇವಲ ಆಭರಣ ಮಾತ್ರವಾಗಿರಲಿಲ್ಲ. ಬದಲಾಗಿ ಅದು ಅವರಿಗೆ ಅದೃಷ್ಟದ ಸಂಕೇತ ಕೂಡ ಆಗಿತ್ತು. ವಿಶ್ವದ ಅನೇಕ ಮೂಲೆಗಳಿಂದ ಅವರು ಆಭರಣಗಳನ್ನು ಸಂಗ್ರಹಿಸಿದ್ದರು ಎಂದು ಹೇಳಿದ್ದಾರೆ.
ನನ್ನ ತಂದೆ ಚಿನ್ನದ ಆಭರಣವಿಲ್ಲದೇ ಎಲ್ಲಿಗೂ ತೆರಳುತ್ತಿರಲಿಲ್ಲ. ಬೆಳಗ್ಗೆ 5 ಗಂಟೆ ವಿಮಾನವಿದ್ದರೂ ಸಹ ಅವರು ತಮ್ಮ ಚಿನ್ನದ ಆಭರಣವನ್ನು ಧರಿಸಲು ಮರೆಯುತ್ತಿರಲಿಲ್ಲ. ಅದು ಒಂದು ರೀತಿ ಅವರಿಗೆ ಶಕ್ತಿಯಾಗಿತ್ತು. ಹೀಗಾಗಿ ನಾವು ತಂದೆಯ ಎಲ್ಲಾ ಆಭರಣಗಳನ್ನು ರಕ್ಷಿಸಲು ನಿರ್ಧರಿಸಿದ್ದೇವೆ. ಇದನ್ನು ನಾವು ಮ್ಯೂಸಿಯಂನಲ್ಲಿ ಇಡುವ ಬಗ್ಗೆ ಯೋಚಿಸುತ್ತಿದ್ದೇವೆ. ಅವರ ಪ್ರೀತಿಯ ಆಭರಣ, ಸನ್ಗ್ಲಾಸ್, ಹ್ಯಾಟ್ಗಳು, ವಾಚುಗಳು ಎಲ್ಲವನ್ನೂ ಮ್ಯೂಸಿಯಂನಲ್ಲಿ ಇಡುತ್ತೇವೆ ಎಂದಿದ್ದಾರೆ.