ಬೆಂಗಳೂರು: ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ.
ಸ್ವರ ಮಾಂತ್ರಿಕನ ಅಗಲಿಕೆಗೆ ಹಿರಿಯ ನಟ ಜಗ್ಗೇಶ್ ತೀವ್ರ ಸಂತಾಪ ಸೂಚಿಸಿದ್ದು, ಯಾರ ಕಣ್ಣು ದೃಷ್ಟಿ ತಾಗಿತು? ಯಾವ ತಪ್ಪಿಗಾಗಿ ಈ ಶಿಕ್ಷೆ! ಇನ್ನು ಎಷ್ಟು ಸಾಧಕರು ಈ ಸಾವಿನ ಶಿಕ್ಷೆಗೆ ಸಾಲು ನಿಂತಿಹರು….ನನ್ನ ನೆಚ್ಚಿನ ಹೃದಯವನ್ನು ಈ ರೀತಿ ಕಳೆದುಕೊಳ್ಳುವೆ ಎನಿಸಿರಲಿಲ್ಲ ಎಂದು ಭಾವುಕರಾಗಿದ್ದಾರೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ದುಃಖ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸಾಲುಗಳನ್ನು ಬರೆದುಕೊಂಡಿರುವ ನಟ ಜಗ್ಗೇಶ್, ನಿಮ್ಮ ಧ್ವನಿ ತಮ್ಮದಾಗಿಸಿ ನಟಿಸಿ, ಚಪ್ಪಾಳೆ ಪಡೆದ ಅದೃಷ್ಟವಂತ ನಟರ ಸಾಲಿನಲ್ಲಿ ನಾನೂ ಒಬ್ಬ. ನೀವು ಕಾಯಕದಲ್ಲಿ ಗಾಯಕನಾದರೂ ನಿಮ್ಮಲ್ಲೊಬ್ಬ ಮಾತೃ ಹೃದಯದ ಭಾವಜೀವಿಯಿದ್ದ. ಮದ್ರಾಸ್ ನಲ್ಲಿ ನಿಮ್ಮಜೊತೆ ಕಳೆದ ಆ ದಿನಗಳು ಮತ್ತೆ ಬಾರದು. ಮರೆಯಲಾಗದು ಎಂದು ನೆನೆದಿದ್ದಾರೆ.
ಇದೇ ವೇಳೆ ಮಹಾಮಾರಿ ಕೊರೊನಾವನ್ನು ವಿಶ್ವಕ್ಕೆ ಹರಡಿರುವ ಚೀನಾದ ವಿರುದ್ಧ ಕಿಡಿಕಾರಿರುವ ಜಗ್ಗೇಶ್, ವಿಶ್ವದ ಬಗ್ಗೆ ಕಾಳಜಿಯಿರುವ ರಾಷ್ಟ್ರಗಳು ಚೀನಾವನ್ನು ಮಟ್ಟಹಾಕಿ ಮೂಲೆಗುಂಪು ಮಾಡಬೇಕು ಎಂದು ಆಗ್ರಹಿಸಿದ್ದಾರೆ.