
ನಟ ಚಿರು ಎಲ್ಲರನ್ನು ಬಿಟ್ಟು ದೂರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಕೇವಲ 39 ವರ್ಷ ವಯಸ್ಸಾಗಿದ್ದ ಇವರು ಮದುವೆಯಾಗಿ 2 ವರ್ಷವಾಗಿದೆಯಷ್ಟೆ. ಇನ್ನು ಕೆಲವೇ ದಿನಗಳಲ್ಲಿ ತಂದೆಯಾಗುವ ಖುಷಿಯಲ್ಲಿದ್ದ ಚಿರು, ತಮ್ಮ ಮಗುವಿನ ಬಗ್ಗೆ ಅನೇಕ ಕನಸುಗಳನ್ನು ಹೊತ್ತಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತೇನೋ. ಎಲ್ಲಾ ಸಂತೋಷ, ಸಂಭ್ರಮವನ್ನು ಅನುಭವಿಸುವ ಮೊದಲೇ ಚಿರನಿದ್ರೆಗೆ ಜಾರಿದ್ದಾರೆ ಚಿರು.
ಇನ್ನು ಚಿರು ಸಾವಿನ ಸುದ್ದಿ ಮಾವ ಅರ್ಜುನ್ ಸರ್ಜಾಗೆ ಬರಸಿಡಿಲಿನಂತೆ ಬಡಿದಿದ್ದೇ ತಡ, ಕುಟುಂಬ ಸಮೇತರಾಗಿ ಹೊರಟಿದ್ದಾರೆ. ಆದರೆ ಕೋವಿಡ್ ಪರಿಸ್ಥಿತಿ ಇದ್ದಿದ್ದರಿಂದ ಸಾಕಷ್ಟು ಕಡೆಗಳಲ್ಲಿ ಇವರಿಗೆ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ತಮಿಳುನಾಡಿನಿಂದ ಬರುವವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಹೀಗಾಗಿಯೇ ಇವರಿಗೂ ಕೋವಿಡ್ ಟೆಸ್ಟ್ ಮಾಡಲಾಗಿದೆ. ಹೀಗಾಗಿ ಅರ್ಜುನ್ ಸರ್ಜಾ ಹಾಗೂ ಅವರ ಕುಟುಂಬ ಬೆಂಗಳೂರು ತಲುಪಿದ್ದು ತಡವಾಯ್ತು.
ನಟ ಚಿರು ಅವರ ಅಂತ್ಯಕ್ರಿಯೆಯನ್ನು ಕನಕಪುರ ರಸ್ತೆಯ ನೆಲಗುಳಿ ಗ್ರಾಮದಲ್ಲಿ ಇರುವ ಧೃವ ಫಾರ್ಮ್ ಹೌಸ್‌ನಲ್ಲಿಯೇ ಮಾಡಲಾಗುತ್ತಿದೆ. ತನ್ನ ಅಣ್ಣ ಯಾವಾಗಲೂ ನನ್ನ ಜೊತೆ ಇರಬೇಕು ಎಂಬ ನಿಟ್ಟಿನಲ್ಲಿ ಧ್ರುವ ಸರ್ಜಾ ಹೇಳಿದ ಕಾರಣ ಅವರ ಫಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.