ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ನಂಟಿನ ಆರೋಪ ಕೇಸ್ ಗೆ ಸಂಬಂಧಿಸಿದಂತೆ ನಾನು ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆಯುತ್ತೇನೆ. ಇನ್ನು ಕನ್ನಡ ಚಿತ್ರರಂಗಕ್ಕೆ ಯಾವುದೇ ಡ್ರಗ್ಸ್ ದುರ್ನಾತ ಬಡಿಯದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹಿರಿಯ ನಟಿ ತಾರಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನ ಹೀರೋ, ಹೀರೋಯಿನ್ ಮಾಡಿದ್ದಾರೆ ಎಂದು ಅಭಿಮಾನಿಗಳು ನಮ್ಮನ್ನೇ ಫಾಲೋ ಮಾಡಿದರೆ ಏನು ಗತಿ? ಡ್ರಗ್ಸ್ ವಿಚಾರ ಇದೀಗ ನಮ್ಮ ರಂಗಕ್ಕೆ ಅಂಟಿಕೊಂಡಿದೆ. ನನ್ನ ಪ್ರಕಾರ ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆದರೂ ಯಾರೋ ಒಬ್ಬರು ಕುಟುಂಬದಲ್ಲಿ ತಪ್ಪು ಮಾಡಿದರೂ ಎಲ್ಲರದ್ದೂ ತಪ್ಪು ಎಂಬಂತಾಗುತ್ತದೆ ಎಂದರು.
ಕೊರೊನಾ ಲಾಕ್ ಡೌನ್ ನಿಂದಾಗಿ ಈಗಾಗಲೇ ಚಿತ್ರರಂಗ ನೆಲಕಚ್ಚಿದೆ. ಇದೀಗ ಚಿತ್ರರಂಗಕ್ಕೆ ಡ್ರಗ್ಸ್ ನಂಟು ಆರೋಪ ಕೇಳಿಬಂದಿದೆ. ನಟ-ನಟಿಯರನ್ನು ಅಭಿಮಾನಿಗಳು ಅನುಸರಿಸಿದರೆ ಗತಿಯೇನು? ನಮ್ಮ ಜನಾಂಗಕ್ಕೆ ನಾವು ಮೋಸ ಮಾಡಬಾರದು ಎಂದು ಹೇಳಿದರು.