
ಸಾರಾ ಅಲಿ ಖಾನ್ ಬಾಲಿವುಡ್ ನಲ್ಲಿ ತಮ್ಮದೇ ಅದ ಛಾಪು ಮೂಡಿಸುತ್ತಿರುವ ಯುವ ನಟಿ. ಬ್ಯೂಟಿ ಕ್ವೀನ್ ಸಾರಾ ಇತ್ತೀಚೆಗೆ ತಮ್ಮ ಸೌಂದರ್ಯದ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ಮನೆಯಲ್ಲಿ ಎಷ್ಟೇ, ಯಾವುದೇ ಕೆಲಸಗಳಿರಲಿ ಅದ್ಯಾವುದೂ ವ್ಯಾಯಾಮಕ್ಕೆ ಸಮನಲ್ಲ. ನೀವು ನಿಮಗಾಗಿ ಒಂದಿಷ್ಟು ಸಮಯವನ್ನು ತೆಗೆದಿಟ್ಟುಕೊಳ್ಳಿ. ಎಲ್ಲ ಕೆಲಸ ಬದಿಗೊತ್ತಿ ವ್ಯಾಯಾಮ ಮಾಡಿ. ಇದರಿಂದ ನಿಮ್ಮ ದೇಹ ಮಾತ್ರವಲ್ಲ ಮನಸ್ಸಿಗೂ ಸೌಂದರ್ಯ ಬರುತ್ತದೆ.
ಹಬ್ಬ ಹರಿದಿನ, ಮಕ್ಕಳ ಪರೀಕ್ಷೆ ಮತ್ತಿತರ ಕಾರಣಗಳಿಗೆ ನಮ್ಮ ತ್ವಚೆಯ ಬಗ್ಗೆ ಕಾಳಜಿ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತೇವೆ. ಇದರ ಬದಲು ಎಲ್ಲಾ ಕೆಲಸಗಳಿಗೂ ಸಮಯ ನಿಗದಿ ಮಾಡಿಕೊಳ್ಳಿ. ನಿತ್ಯ ತ್ವಚೆಯ ಬಗ್ಗೆ ಕೈಗೊಳ್ಳಬೇಕಾದ ಕಾಳಜಿಗೆ ಸಮಯವಿಡಿ. ಅದು ಕೂಡ ಬಹಳ ಮುಖ್ಯ ಎನ್ನುತ್ತಾರವರು.
ಸಾರಾ ಪ್ರಕಾರ ವ್ಯಾಯಾಮದಿಂದ ದೇಹದ ಹೆಚ್ಚಿನ ಬೆವರು ಹೊರಹೋಗುತ್ತದೆ. ಅಲ್ಲದೆ ವಿಷಕಾರಿ ಅಂಶಗಳೆಲ್ಲಾ ಬೆವರಿನ ಮೂಲಕ ಹೊರಬರುತ್ತದೆ. ಪೌಷ್ಟಿಕವಾದ ಆಹಾರಗಳನ್ನು ತಿನ್ನಬೇಕು ಎಂಬ ಕಾರಣಕ್ಕೆ ಲಾಡು, ಕುಲ್ಫಿ, ಕೇಸರಿ ಬಾತ್ ನಿಂದ ಸಂಪೂರ್ಣ ದೂರವಿರಬೇಕಿಲ್ಲ. ಮಿತಿಯಲ್ಲಿ ಅಹಾರ ಸೇವನೆ ಮಾಡುವ ತಂತ್ರ ಕಲಿತುಕೊಳ್ಳಿ. ಕೋಮಲವಾದ ಚರ್ಮದಡಿಯಲ್ಲಿ ಕೊಬ್ಬಿನಂಶ ನಿಲ್ಲಲು ಬಿಡಬೇಡಿ. ಹೆಚ್ಚು ನೀರು ಅಥವಾ ತಾಜಾ ಹಣ್ಣಿನ ರಸ ಸೇವಿಸಿ ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಿ ಎಂಬುದು ಅವರ ಸಲಹೆ.