HomeHealthಮುಟ್ಟಿನ ನೋವು ಸಾಮಾನ್ಯವಲ್ಲ ; ಮಹಿಳೆಯರ ಕಾರ್ಯಕ್ಷಮತೆ ಕುಂಠಿತಗೊಳಿಸುವ ಸಮಸ್ಯೆಗಳ ಕುರಿತು ಇಲ್ಲಿದೆ ಮಾಹಿತಿ !

ಮುಟ್ಟಿನ ನೋವು ಸಾಮಾನ್ಯವಲ್ಲ ; ಮಹಿಳೆಯರ ಕಾರ್ಯಕ್ಷಮತೆ ಕುಂಠಿತಗೊಳಿಸುವ ಸಮಸ್ಯೆಗಳ ಕುರಿತು ಇಲ್ಲಿದೆ ಮಾಹಿತಿ !

ಮಹಿಳೆಯರ ಪಾಲಿಗೆ ತೀವ್ರವಾದ ಮುಟ್ಟಿನ ನೋವು ಎನ್ನುವುದು ಯಾವುದೋ ಒಂದು ದಿನದ ಸಂಕಟವಲ್ಲ, ಬದಲಿಗೆ ಪ್ರತಿಯೊಬ್ಬರೂ ಅನುಭವಿಸಲೇಬೇಕಾದ ಸಾಮಾನ್ಯ ನೋವು ಎಂಬಂತೆ ಬಿಂಬಿತವಾಗಿದೆ. ಆದರೆ ಈ ನೋವು ಕೇವಲ ದೈಹಿಕ ಯಾತನೆಗೆ ಸೀಮಿತವಾಗಿರದೆ, ಅವರ ವೃತ್ತಿಜೀವನ ಹಾಗೂ ದೈನಂದಿನ ಕೆಲಸ ಕಾರ್ಯಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಬಹಿರಂಗವಾಗಿದೆ. ಆರೋಗ್ಯ ಸಮಸ್ಯೆಗಳಿಂದಾಗಿ ಮಹಿಳೆಯರು ತಮ್ಮ ಕೆಲಸದಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಪರದಾಡುತ್ತಿರುವುದು ಅಧ್ಯಯನದಿಂದ ತಿಳಿದುಬಂದಿದೆ.

ಸಾಮಾನ್ಯವಾಗಿ ಮುಟ್ಟಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಸೆಳೆತವನ್ನು ಎಲ್ಲರೂ ಸಹಜವೆಂದು ಪರಿಗಣಿಸುತ್ತಾರೆ. ಆದರೆ ಗರ್ಭಾಶಯದ ಒಳಪದರಕ್ಕೆ ಹೋಲಿಕೆಯಾಗುವ ಅಂಗಾಂಶಗಳು ಗರ್ಭಾಶಯದ ಹೊರಗೆ ಬೆಳೆಯುವುದರಿಂದ ಎಂಡೊಮೆಟ್ರಿಯೋಸಿಸ್ ಎಂಬ ಕಾಯಿಲೆ ಉಂಟಾಗುತ್ತದೆ. ಇದು ಅಂಡಾಶಯಗಳು, ಫಾಲೋಪಿಯನ್ ನಳಿಕೆಗಳು, ಕರುಳು ಹಾಗೂ ಮೂತ್ರಕೋಶದ ಸುತ್ತಲಿನ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ರೋಗ ಲಕ್ಷಣಗಳು ಸಾಮಾನ್ಯ ಮುಟ್ಟಿನ ಅಸ್ವಸ್ಥತೆ ಹಾಗೂ ಜೀರ್ಣಾಂಗ ಸಮಸ್ಯೆಯಂತೆಯೇ ಇರುವುದರಿಂದ ಇದರ ನಿಖರವಾದ ಪತ್ತೆಗೆ ವರ್ಷಗಳೇ ಬೇಕಾಗಬಹುದು ಎನ್ನುತ್ತಾರೆ ತಜ್ಞ ವೈದ್ಯರು.

ಈ ಕಾಯಿಲೆಯ ಪ್ರಮುಖ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಅತ್ಯಂತ ಮುಖ್ಯವಾಗಿದೆ. ಮೊದಲನೆಯದಾಗಿ ತೀವ್ರವಾದ ಹಾಗೂ ಸಹಿಸಲಾಗದ ಮುಟ್ಟಿನ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಮುಟ್ಟಿನ ದಿನಗಳಿಗೂ ಮುನ್ನವೇ ಆರಂಭವಾಗಿ ಹಲವು ದಿನಗಳವರೆಗೆ ಮುಂದುವರಿಯುತ್ತದೆ. ಎರಡನೆಯದಾಗಿ ಮುಟ್ಟಿನ ಸಮಯವಲ್ಲದೆಯೂ ಕೂಡ ಕೆಳಹೊಟ್ಟೆಯಲ್ಲಿ ನಿರಂತರವಾಗಿ ನೋವು ಅಥವಾ ಭಾರವಾದ ಅನುಭವ ಕಾಡಬಹುದು. ಮೂರನೆಯದಾಗಿ ಸಂಭೋಗದ ಸಮಯದಲ್ಲಿ ಅಥವಾ ನಂತರ ತೀವ್ರವಾದ ಆಳವಾದ ನೋವು ಅನುಭವಿಸಬೇಕಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗೆಯೇ ನಾಲ್ಕನೆಯದಾಗಿ ಮಲಬದ್ಧತೆ, ಅತಿಸಾರ ಅಥವಾ ಮಲವಿಸರ್ಜನೆಯ ಸಮಯದಲ್ಲಿ ನೋವು ಕಾಣಿಸಿಕೊಳ್ಳುವುದು ಈ ಕಾಯಿಲೆಯ ಮತ್ತೊಂದು ಲಕ್ಷಣವಾಗಿದೆ. ಐದನೆಯದಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಅಥವಾ ನೋವು ಉಂಟಾಗಬಹುದು. ಇದು ಮೂತ್ರಕೋಶದ ಸೋಂಕಿನಂತೆ ಕಂಡರೂ ಇದರ ಹಿಂದಿನ ನೈಜ ಕಾರಣ ಬೇರೆಯೇ ಇರಬಹುದು. ಆರನೆಯದಾಗಿ ಅತಿ ಹೆಚ್ಚು ರಕ್ತಸ್ರಾವವಾಗುವುದು, ಮುಟ್ಟಿನ ದಿನಗಳ ನಡುವೆಯೂ ರಕ್ತದ ಕಲೆಗಳು ಕಾಣಿಸಿಕೊಳ್ಳುವುದು ಪ್ರಮುಖ ಸೂಚನೆಯಾಗಿದೆ. ಕೊನೆಯದಾಗಿ ಮಕ್ಕಳಾಗದಿರುವ ಸಮಸ್ಯೆಯು ಈ ಕಾಯಿಲೆಯ ಪ್ರಾಥಮಿಕ ಹಂತದಲ್ಲಿ ಬೆಳಕಿಗೆ ಬರುವ ಸಾಧ್ಯತೆಯಿರುತ್ತದೆ.

ಮುಟ್ಟಿನ ನೋವು ತೀವ್ರವಾಗಿದ್ದು, ನಿದ್ರೆ ಕೆಡಿಸುತ್ತಿದ್ದರೆ, ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತಿದ್ದರೆ ಅದನ್ನು ಕೇವಲ ಸಾಮಾನ್ಯವೆಂದು ನಿರ್ಲಕ್ಷಿಸಬಾರದು. ಕಾಲಕಾಲಕ್ಕೆ ಸರಿಯಾದ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ದೀರ್ಘಕಾಲದ ನೋವು, ಫಲವತ್ತತೆಯ ಸಮಸ್ಯೆ ಹಾಗೂ ಒಟ್ಟಾರೆ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular